Sunday, November 22, 2009

ಐಶ್ - ಸಲ್ಮಾನ್ - ನಾನು ಮತ್ತು ಆ ಹಾಡು


ಬೇ ಜಾನ್ ದಿಲ್ ಕೊ ತೇರೆ ಇಷ್ಖ್‍ನೇ ಝಿಂದಾ ಕಿಯಾ
ಫಿರ್ ತೇರೆ ಇಷ್ಖ್ ನೇ ಹೀ ಇಸ್ ದಿಲ್ ಕೋ ತಬ್‍ಹಾ ಕಿಯಾ

ತಡಪ್ ತಡಪ್ ಕೆ ಇಸ್ ದಿಲ್ ಸೇ ಆಹ್ ನಿಕಲ್ ತೀ ರಹಿ
ಮುಜ್‍ಕೋ ಸಝಾ ದಿ ಪ್ಯಾರ್ ಕಿ ಐಸಾ ಕ್ಯಾ ಗುನ್ಹಾ ಕಿಯಾ?
(ಕೊರಡು ಹೃದಯಕ್ಕೆ ಜೀವ ತುಂಬಿದ್ದೇ ನಿನ್ನ ಪ್ರೀತಿ
ಅದನ್ನು ನಿರ್ನಾಮ ಮಾಡಿದ್ದೂ ಅದೇ ಪ್ರೀತಿ

ಹೃದಯದ ಪ್ರತಿ ಮಿಡಿತವೂ ರೋದನೆಯಾಗಿ ಹೊರ ಹೊಮ್ಮುವಂತೆ,
ನನಗೆ ಪ್ರೀತಿಯನ್ನು ಶಿಕ್ಷೆಯಾಗಿ ಕೊಟ್ಟೆ, ನಾನು ಅಂತಹ ಮಹಾಪಾಪ ಮಾಡಿದ್ದಾದರೂ ಏನು?)

’ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದ ಈ ಹಾಡು ನನ್ನನೇಕೆ ಅಷ್ಟು ಸೆಳೆಯುತ್ತದೆಯೋ ಗೊತ್ತಿಲ್ಲ. ಅದೇನು ಮಧುರ ಯುಗಳ ಗೀತೆಯಲ್ಲ; ಪಕ್ಕಾ ವಿರಹ ಗೀತೆ! ಆ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗು ಐಶ್ವ್ರರ್ಯ ನಟಿಸುತ್ತಿದ್ದ ಪಾತ್ರಗಳಿಗೆ ಸಂಬಂಧಿಸಿದ್ದು.

ಪ್ರತಿಯೊಂದು ಪದವನ್ನು ವಿರಹ ವೇದನೆಯಲ್ಲಿ ಅದ್ದಿ ತೆಗೆದಂತಿರುವ ಈ ಹಾಡಿನ ಸಾಹಿತ್ಯ ಅಥವಾ ಗಾಯಕನ ಹಾಡುಗಾರಿಕೆಯಲ್ಲಿರುವ ಆ ಭಾವ ತೀವ್ರತೆ, ಅಥವಾ ಆ ಹಾಡಿನ ಭಾವಕ್ಕೆ ತಕ್ಕಂತೆ ಇಡೀ ಸಂಗೀತದಲ್ಲಿ ಅಲ್ಲಲ್ಲಿ pause ನಂತಹ ಮೌನರಾಗಗಳನ್ನು ಸಂಯೋಜಿಸಿರುವುದು ಅಥವಾ ಒಟ್ಟಾರೆ ಇವೆಲ್ಲಾ ಸೇರಿ ಆ ಹಾಡು ನನ್ನನ್ನು ಆಕರ್ಷಿಸುತ್ತಾ, ಗೊತ್ತಿಲ್ಲ.

ಸುಮಾರು ಹನ್ನೆರಡು ವರ್ಷಗಳ ಹಿಂದಿನ ಮಾತು. ಆಗ ನಾನಿದ್ದದ್ದು ಒಂದು ಹಳ್ಳಿಯಲ್ಲಿ. ಅಲ್ಲಿ ಅಕ್ಕಪಕ್ಕ ಒತ್ತೊತ್ತಿಗೆ ಮನೆಗಳು ಇದ್ದದ್ದು ಕಡಿಮೆ. ನಾನಿದ್ದ ಮನೆಯ ಅಕ್ಕಪಕ್ಕ ಯಾವುದೇ ಮನೆಗಳಿರಲಿಲ್ಲ. ಅಂತಹ ಸರ್ವಸ್ವತಂತ್ರ ಎನ್ನಬಹುದಾದ ಮನೆಯಲ್ಲಿ ಪ್ರತಿದಿನ ರಾತ್ರಿಯ ನೀರವತೆಯಲ್ಲಿ ಆ ಕಾಲದ ನನ್ನ ಏಕಾಂತದ ಸಂಗಾತಿಯಾಗಿದ್ದ ಬಿಪಿಎಲ್ ಟೇಪ್ ರೆಕಾರ್ಡನಲ್ಲಿ ಕೇಕೆ ಎಂಬ ಗಾಯಕ ಈ ಹಾಡನ್ನು ಹಾಡುತ್ತಿದ್ದ. ಅವನು ಎಲ್ಲೋ ನಿರ್ಜನವಾಗಿರುವ ಪ್ರಕೃತಿಯ ಮಡಿಲಲ್ಲಿ ತನ್ನ ವಿರಹ ಗೀತೆಯನ್ನು ತನಗಾಗಿ ಮಾತ್ರ ಹಾಡಿಕೊಳ್ಳುತ್ತಿದ್ದಾನೆ ಅನಿಸುತ್ತಿತ್ತು. ರಾತ್ರಿಯ ಆ ನೀರವತೆ ಹಾಗು ಗಾಯಕನ ಆ ಭಾವ ತೀವ್ರತೆ ಒಂದಂಕ್ಕೊಂದು perfect match ಆಗಿರುತ್ತಿತ್ತು. ನನ್ನ ಆತ್ಮದ ಗೆಳೆಯ ತನ್ನ ವಿರಹ ವೇದನೆಯನ್ನು ತನ್ನ ಪಾಡಿಗೆ ತಾನು ನನ್ನ ಮುಂದೆ ಹೇಳಿಕೊಂಡು ಹಗುರಾಗುತ್ತಿದ್ದಾನೇನೋ ಎಂಬಂತೆ ನಾನು ಆ ಹಾಡನ್ನು ಕೇಳುತ್ತಿದ್ದೆ. ಬೇರೆ ಹಾಡುಗಳನ್ನು ಕೇಳುವ ಎಂದಿನ ಸಾಮಾನ್ಯ volumeಗಿಂತ ಹೆಚ್ಚಿನ ವಾಲ್ಯುಮ್‍ನಲ್ಲೇ ಆ ಹಾಡನ್ನು ಕೇಳುತ್ತಿದ್ದೆ. ಹಾಗೆ loud ಆಗಿ ಕೇಳಿದಾಗ ಮಾತ್ರ ನನಗೆ ಸಮಾಧಾನ!

ಹಾಡಿನಲ್ಲಿ ಆ ಭಗ್ನಪ್ರೇಮಿಗೆ ಯಾರ ವಿರುದ್ದವೂ ತಕರಾರಿಲ್ಲ. ’ಅಗರ್ ಮಿಲೂಂ ಖುದಾ ಸೇ ತೊ ಪೂಚೂಂಗ ಏ ಖುದಾಯಾ, ಜಿಸ್ಮ್ ತು ಮಿಟ್ಟಿ ಕಾ ದೇಕರ್ ಶೀಷೇಸ ದಿಲ್ ಕ್ಯೂಂ ಬನಾಯ.....’ (ಅಕಸ್ಮಾತ್ ದೇವರೊಂದಿಗೆ ಭೇಟಿ ಸಾದ್ಯವಾದರೆ ಅವನಲ್ಲಿ ವಿಚಾರಿಸುತ್ತೇನೆ; ಮಣ್ಣಿನ ದೇಹ ಕೊಟ್ಟು ಹೃದಯವನ್ನೇಕೆ ಗಾಜಿನದು ಕೊಟ್ಟೆ?) ಎಂದು ಕೇಳುತ್ತಾನೆ.

ಆ ಹಾಡು, ಆ ಚಿತ್ರದಲ್ಲಿ ಐಶ್ ಹಾಗೂ ಸಲ್ಮಾನ್ ಖಾನ್ ಪಾತ್ರಗಳ ಕತೆ, ಇವರಿಬ್ಬರ ವೈಯುಕ್ತಿಕ ಜೀವನದಲ್ಲಿ ಜರುಗಿದ ಸಂಗತಿಗಳು..... ಇವೆಲ್ಲವನ್ನೂ ಗಮನಿಸಿದರೆ ’ಹಮ್ ದಿಲ್ ದೇ ಚುಕೆ ಸನಮ್’ನ ನಿರ್ದೇಶಕ ಸಂಜಯ್ ಲೀಲ ಬನ್ಸಾಲಿಗೆ ಇವರಿಬ್ಬರ ಭವಿಷ್ಯ ಆಗಲೇ ಗೊತ್ತಿತ್ತೆ? ಎಂಬ ಅನುಮಾನ ಹುಟ್ಟುತ್ತೆ!

ಐಶ್ವರ್ಯಳನ್ನು ಆಕೆಯ ಮದುವೆ ನಂತರ ಈಗ ಪರದೆಯ ಮೇಲೆ ಕಂಡರೆ ಆ ಹಾಡು ನನಗೂ ಒಂದಿಷ್ಟು ಸಂಬಂಧಿಸಿದ್ದು ಎಂದನಿಸುತ್ತೆ. ನನಗರಿವಿಲ್ಲದೆ ತಡಪ್ ತಡಪ್ ಕೆ ಇಸ್ ದಿಲ್ ಸೆ .... ಹಾಡು ಹೊರ ಬರುತ್ತದೆ. ನನ್ನ ಮಡದಿ ನನ್ನ ’ವಿರಹ ವೇದನೆ’ ಯನ್ನು ಕಂಡು ಒಳಗೊಳಗೆ ಮುಸಿ ಮುಸಿ ನಗುತ್ತಾಳೆ.
(ನವೆಂಬರ್ 20 ರ ’ಹಾಯ್ ಬೆಂಗಳೂರ್!’ ಪತ್ರಿಕೆಯ ’ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣದಲ್ಲಿ ಪ್ರಕಟಿತ ನನ್ನ ಬರಹ)

Thursday, November 5, 2009

ಸ್ವಂತ ಹೆಂಡತಿಯನ್ನೂ ಪ್ರೀತ್ಸೋದು ತಪ್ಪಾ?

ಡಿಯರ್ ಅಮೇರಿಕನ್ಸ್,

ಹೇಗಿದ್ದೀರಿ ? ರಿಸೆಷನ್ ಕತೆ ಏನಾಯಿತು? ಅದು ಮುಗಿಯುವ ಲಕ್ಷಣ ಕಾಣುತ್ತಿದೆಯಂತೆ? ಅಲ್ಲಾ ಮಾರಾಯ್ರೆ, ನೀವು, ನಿಮ್ಮ ದೇಶದ ಪಾಲಿಸಿಗಳು, ನಿಮ್ಮ ವಿರೋಧ ಪಕ್ಷದವರು ಎಲ್ಲಾ ಒಂದು ತರಹದ ಅತಿರೇಕಿಗಳು ಕಣ್ರಿ!

ಒಂದು ಲಕ್ಷದ ಬೆಲೆಯ ಮನೆಯ ಮೇಲೆ ನೇರವಾಗಿ ಹಾಗು ಪರೋಕ್ಷವಾಗಿ ಸುಮಾರು ಐದು ಲಕ್ಷದಷ್ಟು ಸಾಲ ಕೊಟ್ಟು ರಿಸೆಷನ್ ಎಂಬ ಫಜೀತಿಯನ್ನು ಮೈ ಮೇಲೆ ಎಳೆದುಕೊಂಡ್ರಿ. ಅಷ್ಟೇ ಅಲ್ಲದೇ, ನಮಗೂ ಒಂದಿಷ್ಟು ಪ್ರಸಾದದ ರೂಪದಲ್ಲಿ ಹಂಚಿಬಿಟ್ರಿ!

ಅಲ್ರೀ, ಆ ಒಬಾಮ 'ಸಾಹೇಬರು’ ಅಧ್ಯಕ್ಷರಾದ ನಂತರ, ಅವರು ಮತ್ತು ಅವರ ಮನದನ್ನೆ ಮಿಶೆಲ್ ತಮ್ಮ ದಾಂಪತ್ಯ ಜೀವನವನ್ನು ಇಷ್ಟು ವರ್ಷ ಸಾಧ್ಯವಾಗದ ರೀತಿಯಲ್ಲಿ ಹೊಸದಾಗಿ ರೂಪಿಸಿಕೊಳ್ಳುತ್ತಿದ್ದಾರೆ. ಪಾಪ! ಮದುವೆಯಾದ ಹೊಸದರಲ್ಲಿ ಒಂದಿಷ್ಟು ದಿನಗಳು ಮಾತ್ರ 'ಜೊತೆ ಜೊತೆಯಲ್ಲಿ.......’ ಇದ್ದವರು ಈಗ ಸುಮಾರು ಹನ್ನೇರಡು ವರ್ಷಗಳ ನಂತರ ಒಂದೇ ಸೂರಿನಡಿಯಲ್ಲಿ ವಾರದ ಏಳೂ ದಿನಗಳು ಜೊತೆಯಾಗಿ ಕಳೆಯುವ ಭಾಗ್ಯ ಪಡೆದುಕೊಂಡಿದ್ದಾರೆ.

ಅಮೇರಿಕದ ಅಧ್ಯಕ್ಷನ ಜವಾಬ್ದಾರಿ ಏನು ಕಡಿಮೆನಾ? ಆತ ಕೇವಲ ಅಮೇರಿಕ ಅಲ್ಲ ಇಡೀ ಜಗತ್ತಿಗೆ 'ದೊಡ್ಡಣ್ಣ' ಉರುಫ್ ’ದೊಣ್ಣೆ ನಾಯಕ’ ಇದ್ದಂತೆ. ಅಂತಹ ಕೆಲಸದ ಒತ್ತಡದಲ್ಲೂ ಒಬಾಮ ಸಾಹೇಬರು ಪ್ರತಿದಿನ ಬೆಳಿಗ್ಗೆ ತಮ್ಮ ಮಕ್ಕಳು ಶಾಲೆಗೆ ಹೋಗುವಾಗ ಮೆಶೆಲ್ ಜೊತೆ ತಾವೂ 'ಟಾಟಾ, ಟಾಟಾ, ಬೈ ಬೈ ’ ಹೇಳುತ್ತಾರೆ. ಆಗಾಗ ಈ ದಂಪತಿ ಟೆನ್ನಿಸ್ ಆಡುತ್ತಾರೆ. ಒಟ್ಟಿಗೆ ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಅವರ ಸಾರ್ವಜನಿಕ ದಿನಚರಿ ಪ್ರಾರಂಭವಾಗುವುದೇ ಬೆಳಿಗ್ಗೆ ಒಂಭತ್ತರ ನಂತರ.

ಹಾಗಂತ ಅವರೇನು 'ವ್ಹೈಟ್ ಹೌಸ್’ ಅನ್ನು ಶಯನ ಗೃಹ ಮಾಡಿಕೊಂಡಿಲ್ಲ. ಬರಾಕ್ ಒಬಾಮ ಆಡಳಿತದ ನಡೆಗಳ ಬಗ್ಗೆ ಸಾರ್ವಜನಿಕ ಗ್ರಹಿಕೆ ಏನಿದೆ, ಸಾರ್ವಜನಿಕ ನಿರೀಕ್ಷೆ ಏನು? ಇಂತಹ ವಿಷಯಗಳ ಬಗ್ಗೆ ಸಾಮನ್ಯ ಗೃಹಿಣಿಯಂತೆ ಮಿಶೆಲ್ ತನ್ನ ಪತಿರಾಯನಿಗೆ feed back ನೀಡುತ್ತಾಳೆ. ಒಬಾಮ ಆಡಳಿತದ ನಿರ್ದಾರಗಳ ಮೇಲೆ ಅನವಶ್ಯಕ ಹಾಗು ಅನಪೇಕ್ಷಿತ ಪ್ರಭಾವ ಬೀರದಂತೆ ಒಂದು ಇತಿ ಮಿತಿಯಲ್ಲಿ ನಿತ್ಯ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಕ್ರಿಯವಾಗಿ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾಳೆ.

ಒಬಾಮ ಈಗಿನ ಸ್ಥಾನಕ್ಕೇರಲು ಏಣಿಯನ್ನು ನಿರ್ಮಿಸಿಕೊಳ್ಳುತ್ತಿದ್ದ ಕಾಲದಲ್ಲಿ ಇಬ್ಬರೂ ಬಹಳ ಕಷ್ಟಪಟ್ಟಿದ್ದಾರೆ. ದೀರ್ಘ ಸಮಯ ಪರಸ್ಪರರು ಏಕಾಂಗಿಯಾಗಿ ಇರಬೇಕಾಗಿ ಬಂದಿದೆ. ಬಹಳಷ್ಟು ತ್ಯಾಗ ಮಾಡಿದ್ದಾರೆ. ಈಗ ಅವರ ತ್ಯಾಗ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.

ಜವಾಬ್ದಾರಿಗಳು ಹೆಚ್ಚಾದಾಗ ಕೆಲಸದ ಒತ್ತಡದಲ್ಲಿ ದಾಂಪತ್ಯ ಜೀವನ ಸೊರಗುತ್ತದೆ. ಆದರೆ ಒಬಾಮ ದಂಪತಿಯ ವಿಷಯದಲ್ಲಿ ಮಾತ್ರ ಹೊಸ ಚಿಗುರು ಮೂಡುತ್ತಿದೆ. ಇಬ್ಬರೂ ಬಹಳ ಜಾಣ್ಮೆಯಿಂದ ನಿರ್ವಹಿಸುತ್ತಿದ್ದಾರೆ.

ಒಬಾಮ ರಾಜಕೀಯಕ್ಕೆ ಬರುವುದು ಮಿಶೆಲ್ ಗೆ ಒಂದಿಷ್ಟೂ ಇಷ್ಟವಿರಲಿಲ್ಲ. ರಾಜಕೀಯ ಅವನನ್ನು ತನ್ನಿಂದ ದೂರ ಮಾಡಿಬಿಡುತ್ತದೆ ಎಂಬ ಸಹಜ ಆತಂಕ ಆಕೆಗಿತ್ತು. ಕ್ರಮೇಣ ಆತನ ದೂರದರ್ಶಿತ್ವ, ಕನಸು ಸಾಧನೆಯ ಹಂಬಲ, ಬದಲಾವಣೆ ತರಬೇಕೆಂಬ ತುಡಿತ ಇವೆಲ್ಲಾ ಮನವರಿಕೆಯಾದಾಗ ಅವನ ಹಿಂದೆ ಭದ್ರವಾಗಿ ನಿಂತು ಬಂದಿದ್ದನ್ನೆಲ್ಲಾ ಸಹಿಸಿಕೊಂಡಳು. 1995 ರಲ್ಲಿ ಕೆಳಹಂತಂದ ಚುನಾವಣೆಗೆ ಆತನಿಗೆ ಉಮೇದುವಾರಿಕೆ ಗಳಿಸಿಕೊಡುವ ಸಲುವಾಗಿ ಸಹಿ ಸಂಗ್ರಹಣೆಗಾಗಿ ಆತನ ಕ್ಷೇತ್ರದ ಪ್ರತಿ ಮನೆಯ ಬಾಗಿಲನ್ನು ಅಕ್ಷರಶಃ ಬಡಿದಿದ್ದಾಳೆ. ಆಗ ಆತನಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಳು.

ಇತ್ತೀಚಿಗೆ ಒಬಾಮನ ಹಳೇ ಬಾಸ್ಕೆಟ್ ಬಾಲ್ ಮಿತ್ರರನ್ನು ಹುಡುಕಿ, ಆತನ ಅರಿವಿಗೆ ಬಾರದಂತೆ ಆತನ ಹೂಟ್ಟುಹಬ್ಬದ ದಿನಕ್ಕೆ ಆಮಂತ್ರಿಸಿ birthday surprise ನೀಡಿದ್ದಾಳೆ.

ಇಂತಹ ಬಾಳಸಂಗಾತಿಗೆ, ಅಧ್ಯಕ್ಷ್ಯೀಯ ಚುನಾವಣೆಗಳ ಎಲ್ಲಾ ಜಂಜಾಟಗಳು ಮುಗಿದ ನಂತರ ಒಂದು 'ಮಧುರ ಸಂಜೆ’ಗಾಗಿ ನ್ಯೂ ಯಾರ್ಕ್ ಗೆ ಕರೆದುಕೊಂಡು ಹೋಗುತ್ತೇನೆಂದು ಆಶ್ವಾಸನೆ ನೀಡಿದ್ದರು ಒಬಾಮ. ಅದರಂತೆ ತಮ್ಮ ಮಾತನ್ನು ನದೆಸಿಕೊಟ್ಟರು.
ಡಿಯರ್ ಅಮೇರಿಕನ್ಸ್, ಇಷ್ಟಕ್ಕೇ ನೀವೆಲ್ಲಾ ಬೊಬ್ಬೆ ಹೊಡೆದಿರಿ. ಇಡೀ ಜಗತ್ತೇ ರಿಸೆಷನ್ ನಲ್ಲಿ ಮುಳುಗಿದೆ ಆದರೆ ಒಬಾಮ ತನ್ನ ಹೆಂಡತಿ ಜೊತೆ ತೆರಿಗೆದಾರರ ಹಣದಲ್ಲಿ ನ್ಯೂ ಯಾರ್ಕ್ ಬೀದಿಗಳಲ್ಲಿ ರೊಮ್ಯಾನ್ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿದಿರಿ.

ನೆನಪಿದೆಯಾ ನಿಮಗೆ? ಸುಮಾರು ಒಂದು ದಶಕದ ಹಿಂದೆ ಬಿಲ್ ಕ್ಲಿಂಟನ್ ಪರಸ್ತ್ರೀಯ ವ್ಯಾಮೋಹಕ್ಕೆ ಒಳಗಾಗಿದ್ದಾಗ ಎಷ್ಟು ದೊಡ್ಡ issue ಮಾಡಿದ್ರಿ ಎಂದು? ಆ ವಿಷಯದಲ್ಲಾದರು ಒಂದಿಷ್ಟು ತರ್ಕ ಇತ್ತು ಬಿಡಿ. ಆದರೆ ಒಬಾಮ ಸ್ವಂತ ಹೆಂಡತಿಯನ್ನೂ ಪ್ರೀತ್ಸೊದು ತಪ್ಪಾ?!

ಆಗ ಕ್ಲಿಂಟನ್ ಕ್ಷಮಾಪಣೆ ಕೇಳುವಂತೆ ಮಾಡಿದ್ರಿ. ಈಗ ಪಾಪ ಒಬಾಮ 'ಈ ಅಧ್ಯಕ್ಷ ಪಟ್ಟ ಇಲ್ಲದಿದ್ದರೆ ಎಷ್ಟು ಸ್ವತಂತ್ರವಾಗಿ ಇರಬಹುದಿತ್ತು? ನನ್ನ ಸಂಗಾತಿಯೊಂದಿಗೆ ಎಲ್ಲಿ ಬೇಕಾದಲ್ಲಿ ಓಡಾಡಿದರೂ ಯಾರು ಕೇಳುತ್ತಿರಲಿಲ್ಲ. ಫೋಟೊಗ್ರಾಫರ್‍ಗಳು ಹಿಂಬಾಲಿಸುವ ಪ್ರಮೇಯವೇ ಇರುತ್ತಿರಲಿಲ್ಲ!’ ಎಂದು ಮರಗುವಂತೆ ಮಾಡುತ್ತಿದ್ದೀರಿ. ಒಬಾಮ ಮಿಶೆಲ್ ಸುಖವಾಗಿ ಇರುವುದನ್ನು ನೋಡಿ ನಿಮಗೆ ಹೊಟ್ಟೆಕಿಚ್ಚಾ?

ಈ ಅಧ್ಯಕ್ಷ ದಂಪತಿ ಅಂತರಾಷ್ಟ್ರೀಯ ಆದರ್ಶ ಜೋಡಿಯಾಗಿ ರೂಪುಗೊಳ್ಳುತ್ತಿದೆ. ಒಬಾಮಗೆ ಶಾಂತಿ ಸ್ಥಾಪನೆ ಬದಲು ಸುಖ ಸಂಸಾರದ ಸ್ಥಾಪನೆಗಾಗಿ ನೋಬೆಲ್ ಕೊಡಬಹುದಿತ್ತು. ದಯವಿಟ್ಟು ಈ ಜೋಡಿಗೆ ಹಿಂಸೆ ನೀಡಬೇಡಿ. ಇವರ ಸುಖ ದಾಂಪತ್ಯ ಅಮೇರಿಕ ಅಥವ ಜಗತ್ತಿನ ಹಿತಾಸಕ್ತಿಗೆ ಮಾರಕವಲ್ಲ. ಬದಲಿಗೆ ಪೂರಕವಾಗಿದೆ. ಅಮೇರಿಕದ ಅಧ್ಯಕ್ಷ ಶಾಂತಿ ನೆಮ್ಮದಿಯಿಂದ ಇದ್ದರೆ ಬೇರೆ ದೇಶದವರಿಗೂ ಒಂದಿಷ್ಟು ನೆಮ್ಮದಿ!?

ದಯವಿಟ್ಟು ಅರ್ಥ ಮಾಡೀಕೊಳ್ಳಿ. ಅವರನ್ನು ನೋಡಿ ನೀವೂ ಕಲಿಯಿರಿ.

ನಿಮಗೆ ಜ್ಞಾನೋದಯ ಆಗಬಹುದೆಂಬ ವಿಶ್ವಾಸದೊಂದಿಗೆ...................

ಎ ಜೆ ಜೆSunday, April 26, 2009

"ಒಂದೊಂದ್ ವರ್ಸಕ್ಕೆ ಒಂದೊಂದ್ ಇಲೆಕ್ಸನ್ ಆಗ್ಬೇಕು, ದೇಶಕ್ ಒಳ್ಳೆದಾಗುತ್ತೆ!!"


ಯಜಮಾನ್ರೆ, ನಿಮ್ಮ ಕಡೆ ಹೇಗಿದೆ ಎಲೆಕ್ಶನ್ ಗಲಾಟೆ?
"ಹಿ, ಹೀ ಬಿಡಿ ಸ್ವಾಮಿ. ನಿಮಗೇನ್ ಗೊತ್ತಿಲ್ಲದ್ ವಿಷ್ಯನಾ ಅದು?"
ಸ್ವಲ್ಪ ಸಂಕೋಚದಿಂದಲೇ ಬಂತು ಉತ್ತರ. ಅದರ ಜೊತೆಗೆ 'ತೀರ್ಥ'ದ ವಾಸನೆಯೂ ಸಹ!
ನಿಮ್ ಪ್ರಕಾರ ಯಾರ‍್ದ್ ಬರುತ್ತೆ ಸರ್ಕಾರ?
"ಎಲ್ಲಾರ್ದು ಸ್ವಾಮಿ"
ಎಲ್ಲಾರ್ದು ಅಂದ್ರೆ?
"ಎಲ್ಲಾ ಪಕ್ಷಗಳದ್ದು. ಚಿತ್ರನ್ನ ಸರ್ಕಾರ.ಹಿ ಹೀ"
ಈಗೀಗ ಬರುವ ಸರ್ಕಾರಗಳೆಲ್ಲ ಯಾಕೆ ಚಿತ್ರನ್ನ ಸರ್ಕಾರಗಳು?
"ಪಾಪ, ಇಲೆಕ್ಸನ್‍ನಾಗೆ ಎಲ್ಲಾ ಪಕ್ಷದವ್ರೂ ಹಣ, ಹೆಂಡ ಹಂಚ್ತಾರಲ್ವಾ? ಅದಕ್ಕೆ ಎಲ್ರಿಗೂ ಅಧಿಕಾರ ಒಂದಿಂದಿಷ್ಟು ಸಿಗ್ಲಿ ಅಂತ ನಾವೇ ಅ ತರ ಸರ್ಕಾರಗಳು ಬರೋ ಹಾಗ್ ಮಾಡ್ತೀವಿ"
ನಾವೇ ಅಂದ್ರೆ?
"ವೋಟ್ ಹಾಕೊರು"

ಒಳ್ಳೆ interesting ಆಸಾಮಿನೇ ಸಿಕ್ಕಿದ್ದಾನೆ ನನಗೆ. ಆದ್ರೆ 'ತೀರ್ಥ'ದ ಪ್ರಭಾವ. ಸರಿಯಾಗಿ ನಿಲ್ಲಲ್ಲು ಆಗುತ್ತಿರಲಿಲ್ಲ. ಅದಕ್ಕೆ ಅಲ್ಲೇ ಪಕ್ಕದಲ್ಲಿದ್ದ ಶಾಲೆ ಆವರಣದಲ್ಲಿ ಕರೆದು ಕೊಂಡು ಹೋಗಿ ಕುಳ್ಳಿರಿಸಿಕೊಂಡೆ.

ಈ ತರಹ ಚಿತ್ರನ್ನಾ ಸರ್ಕಾರ ಬಂದ್ರೆ ಅವ್ರವ್ರೆ ಕಿತ್ತಾಡಿ ಇನ್ನೊಂದ್ ಎಲೆಕ್ಶನ್ ಬರೊ ಹಾಗೆ ಮಾಡ್ತಾರಲ್ವ?
"ಆಗ್ಲಿ ಬುಡಿ! ಒಂದೊಂದ್ ವರ್ಸಕ್ಕೆ ಒಂದೊಂದ್ ಇಲೆಕ್ಸನ್ ಆಗ್ಬೇಕು....................."
ಹಾಗಾದ್ರೆ ಖಜಾನೆಲಿ ಎಲ್ಲ್ ದುಡ್ಡ್ ಉಳಿಯುತ್ತೆ?
"ದುಡ್ಡಿಗ್ ಏನ್ ಬರಾ ಸಾಮಿ? ಇಷ್ಟ್ ವರ್ಸ ತಿಂದಿಲ್ವಾ? ಕಕ್‍ಲಿ ಬಿಡಿ..........."
ನಾನ್ ಹೇಳಿದ್ದು ಸರ್ಕಾರದ್ ಖಜಾನೆ........
"ಅಯ್ಯೋ ಬುಡಿ ಸಾಮಿ! ಇಲೆಕ್ಸನ್ ಆಗ್ಲಿ ಆಗ್ದಲೆ ಇರ್ಲಿ ಅದು ಕಾಲಿ ಆಗೋದು ಇದ್ದೆ ಇದೆ. ನಾವು ಓಟ್ ಹಾಕಿ ಕಳ್ಸಿದವ್ರು ಖಾಲಿ ಮಾಡ್ದೆ ಇರ್ತಾರ? ಅವಾಗ್ ಅವಗಾ ಇಲೆಕ್ಸನ್ ಬಂದ್ರೆ ಒಳ್ಳೆದೆ!!"
ನಿಮ್ಗೆಲ್ಲ ಕುಡಿಯೊಕೆ ಹೆಂಡ, ಖರ್ಚಿಗೆ ದುಡ್ಡು ಸಿಗುತ್ತಲ್ಲಾ ಅದಕ್ಕ?
"ಏ ಹೋಗಿ ಸಾಮಿ. ನೀವ್ ಜಾಸ್ತಿ ತಿಳ್ದವರಲ್ಲ. ಇಲೆಕ್ಸನ್ ಬಂದ್ರೆ ಜನ್ರ ಕೈಗೆ ವಸಿ ಕೆಲ್ಸ ಸಿಗುತ್ತೆ. ಈಗ್ ನೋಡಿ ನಾವ್ ಇಲ್ಲಿ ಕೂತಿದಿವಲ್ಲ ಇಲ್ಲಿ ನಮ್ಮಿಬ್ರನ್ನು ಬಿಟ್ಟೂ ಇನ್ನ್ಯಾರ್ದ್ರು ಕಾಣಿಸ್ತಾರ?........."
"ಕಾಣಿಸ್ತಾರ ಹೇಳಿ ಸಾಮಿ"
ಇಲ್ಲ. ಯಾಕೆ?
"ಇಲೆಕ್ಸನ್ ಬರೊದಕ್ ಮೊದ್ಲು ಇಲ್ಲೆ ನಮ್ಮೂರ ಎಲ್ಲಾ ಪುಂಡ್‍ ನನ್‍ಮಕ್‍ಳು ಏನು ಕೆಲ್ಸ ಇಲ್ದೆ ಇಸ್ಪೀಟ್ ಆಡ್ಕೊಂಡು ದಾರಿಲಿ ಹೋಗ್ ಬರೋ ಹೆಣ್ ಮಕ್ಳಿಗೆ ಚುಡಾಯಿಸ್ಕೊಂಡು ಉರಿನ್ ನೆಮ್ದಿ ಹಾಳ್ ಮಾಡ್ತಿದ್ರು.. ಈಗ ಯಾವ್‍ದ್ಯಾವ್ದೊ ಪಕ್ಷದವ್ರ್ ಹಿಂದೆ ಸುತ್‍ತ್ತಿದ್ದಾರೆ. ಎಲೆಕ್ಸನ್ ಮುಗಿಯೊವರ್ಗೆ ಇಲ್ಲಿ ವಸಿ ನೆಮ್ದಿ ಇರುತ್ತೆ"
"ಇನ್ನೊಂದ್ ವಿಸ್ಯ. ಆಗಾಗ್ ಇಲೆಕ್ಸನ್ ಬಂದ್ರೆ ಈ ರಾಜ್‍ಕಾರ‍್ನಿಗಳ್ ಹತ್ರ ಕಾಸ್ ಎಲ್ಲಾ ಕಾಲಿಯಾಗ್ಬಿಡುತ್ತೆ. ಆಗ ಈಗ್ ಹಂಚ್‍ತವ್ರಲ್ಲಾ ಹಂಗೆ ಹಂಚಕ್ಕೆ ಎಲ್ಲಿರುತ್ತೆ ದುಡ್ಡು? ಎಲ್ಲಾ ಪಕ್ಸದವ್ರುದು ಒಂದೇ ಗತಿ ಆಗುತ್ತೆ. ಆಗ್ ನೋಡಿ ಸರಿ ದಾರಿಗ್ ಬರ್ತಾರೆ. ವೋಟ್ ಕರೀದಿಗೆ ಕಾಸೇ ಇಲ್ಲ ಅಂದ್ಮೇಲೆ ನಮ್‍ಂತೊರಿಗೆ ತಲೆ ಕೆಡ್‍ಸೊಕೆ ಎಲ್ ಆಗುತ್ತೆ. ಆಗ ಜನ್ರ ಕೆಲ್ಸ ಸರಿ ಮಾಡಿದವ್‍ರಿಗೆ ಮಾತ್ರ ಓಟ್ ಬೀಳ್ತಾವೆ."

("ತಿರ್ಥ' ಒಳಗೆ ಹೋದ್ರೆ ಸತ್ಯ ಎಲ್ಲಾ ಹೊರಗೆ ಬರುತ್ತಂತೆ. ಈ ಆಸಾಮಿಯನ್ನು ಸಂದಂರ್ಶಿಸಿದ ಮೇಲೆ ಅದು ನಿಜ ಅನ್ನಿಸುತ್ತಿದೆ.-- ಸಂದರ್ಶಕ)

ಚಿತ್ರ : ಏ ಜೆ ಜೆ

Sunday, April 19, 2009

ದೀಪದ ಕೆಳಗಿನ ಕತ್ತಲ ಕರಾಳತೆ!!


ಆ ನತದೃಷ್ಟ ಭೂಭಾಗದ ಅಧಿಕೃತ ಹೆಸರೇ cut-off point! ಇದು ಮೂರು ಕಡೆಯಿಂದ ಜಲಾವೃತ ಗುಡ್ದಗಾಡು ಪ್ರದೇಶ. ಸುಮಾರು 151 ಸಣ್ಣ ಹಳ್ಳಿ ಅಥವ ಕೊಪ್ಪಲುಗಳನ್ನು ಹೊಂದಿರುವ ಈ ಪ್ರದೇಶದಿಂದ ಪಟ್ಟಣ್ಣಕ್ಕೆ ಬರಬೇಕೆಂದರೆ ಇಲ್ಲಿ ಸಿಗುವ ಏಕೈಕ ಮೋಟಾರು ದೋಣಿ (launch)ಯೇ ಗತಿ. ಸುಮಾರು 25000 ದಷ್ಟು ಜನಸಂಖ್ಯೆಯುಳ್ಳ ಇದು ಒರಿಸ್ಸಾದ ಮಲಕಾನ್‍ಗಿರಿ ಜಿಲ್ಲೆಯಲ್ಲಿದೆ. ಇಲ್ಲಿಯವರೆಲ್ಲ ಗಿರಿಜನರೇ. ಇಲ್ಲಿ ಯಾರಿಗಾದರು ಮಲೇರಿಯಾದಂತಹ ಕಾಯಿಲೆ ತಗುಲಿದರೆ ಚಿಕಿತ್ಸೆಗಾಗಿ 30 ಕಿ ಮೀ ದೂರ ದೋಣಿಯಲ್ಲಿ ಬರಬೇಕು. ದೋಣಿ ಸಿಗಲು ಸುಮಾರು ಹತ್ತು ಕಿ ಮೀ ನಡೆದುಕೊಂಡು ಬರಬೇಕು. ಆ ದೋಣಿಯು ಪಟ್ಟಣದಿಂದ ಬರುವುದೇ ದಿನಕ್ಕೆ ಒಂದು ಹೊತ್ತು!

ತನ್ನ ಮಗ್ಗುಲಲ್ಲೇ ವರ್ಷಕ್ಕೆ 720 m w ವಿದ್ಯುತ್ ಉತ್ಪಾದಿಸುವ ಬಾಲಿಮೇಲ ಜಲವಿದ್ಯುದ್ಗಾರ ಇದ್ದರೂ ಒಮ್ಮೆಯೂ ಈ ಪ್ರದೇಶ ವಿದ್ಯುತ್‍ಚ್ಛಕ್ತಿಯನ್ನು ಕಂಡಿಲ್ಲ. ಇಲ್ಲಿಯ ಒಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ಇದುವರೆಗು ವಿದ್ಯುತ್ ದೀಪವೇ ಬಳಸಿಲ್ಲ!
1960 ರಲ್ಲಿ ಈ ಜಲವಿದ್ಯುತ್ ಯೋಜನೆಗಾಗಿ 91 ಹಳ್ಳಿಗಳು ಮುಡುಗಡೆಯಾಗಿವೆ. 1200 ಕುಟುಂಬಗಳು ಸ್ಥಳಾಂತರಗೊಂಡಿವೆ. ಅಂದಿನಿಂದ ಇಂದಿನವರೆಗೂ ಈ ಪ್ರದೇಶ ಕಡೆಗಣಿಸಲ್ಪಟ್ಟಿದೆ. ಅಭಿವೃದ್ದಿ ಯೋಜನೆಗಳಿಗೆ ಸಕಲವನ್ನೂ ತ್ಯಾಗ ಮಾಡಿರುವ ಇಲ್ಲಿಯವರಿಗೆ ಆ ಅಭಿವೃದ್ದಿಯ ಒಂದಂಷದಷ್ಟೂ ಫಲ ದಕ್ಕಿಲ್ಲ. ಬದಲಿಗೆ ಇನ್ನೂ ಹಿಂದುಳಿದುಬಿಟ್ಟಿದ್ದಾರೆ. ಒಮ್ಮೆ ಈ ಪ್ರದೇಶಕ್ಕೆ ಸಂಬಂಧಿಸಿದ ಯಾವುದೋ ಸಮೀಕ್ಷೆಗಾಗಿ ಬಂದ ಸರ್ಕಾರಿ ಅಧಿಕಾರಿಗಳ ತಂಡ ಹಳ್ಳಿ ಒಳಗೆ ಬರದೆ 20 ಕಿ ಮೀ ದೂರದಲ್ಲೇ ನದಿ ದಂಡೆಯಲ್ಲಿ ಠಿಕಾಣಿ ಹೂಡಿ ಅಲ್ಲಿಗೇ ಇಲ್ಲಿಯ ನಿವಾಸಿಗಳನ್ನು ಕಾಲ್ನಡಿಗೆಯಲ್ಲಿ ಕರೆಸಿಕೊಂಡಿದ್ದರಂತೆ. ಇಲ್ಲಿಯವರು ಎಷ್ಟರಮಟ್ಟಿಗೆ ಕಡೆಗಣಿಸಲ್ಪಟ್ಟಿದ್ದಾರೆಂಬುದಕ್ಕೆ ಇದೊಂದು ಉದಾಹರಣೆ.

ಪತ್ರಕರ್ತ ಪಿ.ಸಾಯಿನಾಥ್ ತಮ್ಮ 'Everybody loves a good drought' ಪುಸ್ತಕದಲ್ಲಿ ಈ ಪ್ರದೇಶದ ಬಗ್ಗೆ ಬರೆದಿದ್ದಾರೆ.

ಇತ್ತೀಚಿಗೆ ಮೊದಲ ಹಂತದ ಚುನಾವಣೆ ವೇಳೆ ನಕ್ಸಲಿಯರ ಹಿಂಸಾಚಾರ ನಡೆದ ಸ್ಥಳಗಳಲ್ಲಿ ಈ ಪ್ರದೇಶವೂ ಒಂದು. ಸುಮಾರು 7-8 ವರ್ಷಗಳಿಂದ ಇಲ್ಲಿ ನಕ್ಸಲರು ಬಲವಾಗಿ ಬೇರೂರಿದ್ದಾರೆ. ಇದು ಅವರ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಜಾಗದಂತಿದೆ. ಇಷ್ಟು ವರ್ಷಗಳಲ್ಲಿ ಹೋದ ವರ್ಷದವರೆಗೂ ಇಲ್ಲಿ ಒಂದೇ ಒಂದು ಪೋಲಿಸ್ ಠಾಣೆ ಅಥವ ಉಪ ಪೋಲಿಸ್ ಠಾಣೆಯಾಗಲಿ ಇರಲಿಲ್ಲ! ಕಳೆದ ಮೆ ತಿಂಗಳ್ಳಲ್ಲಷ್ಟೆ ಇಲ್ಲಯ ಒಂದು ಹಳ್ಳಿಯಲ್ಲಿ ಒಂದು ಠಾಣೆಯನ್ನು ತೆರೆಯಲಾಗಿದೆ. ಇದರಿಂದ ಸುಮಾರು 75 ಹಳ್ಳಿಗಳಿಗೆ ಅನುಕೂಲ ವಾಗುತ್ತೆ. ಆದರೆ ಉಳಿದ ಹಳ್ಳಿಗಳಿಗೆ 35 ಕಿ ಮೀ ದೂರದ ಊರಿನ ಠಾಣೆಯೇ ಗತಿ.

ಇಲ್ಲಿ ಹರಿಯುವ ಗುರುಪ್ರಿಯ ನದಿಗೆ ಸೇತುವೆ ನಿರ್ಮಿಸಿದರೆ ಈ ಪ್ರದೇಶದ ಸಂಚಾರ ಸಮಸ್ಯೆ ಬಹಳಷ್ಟು ಬಗೆಹರಿದು ಇಲ್ಲಿಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದರೆ ಸೇತುವೆಯ ಪ್ರಸ್ತಾಪ ಕಳೆದ ವರ್ಷದವರೆಗೆ ಕೇವಲ ಕಾಗದ ಮೇಲಷ್ಟೆ ಇತ್ತು. ಒಮ್ಮೆ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಖಾಸಗಿ ನಿರ್ಮಾಣ ಸಂಸ್ಥೆಗೆ ನೀಡಲಾಗಿತ್ತು. ಆದರೆ ನಕ್ಸಲರ ಉಪಟಳದಿಂದಾಗಿ ಆ ಕಾರ್ಯ ಸ್ಥಗಿತವಾಯಿತು. ಸೇತುವೆ ನಿರ್ಮಾಣ ಯೋಜನೆ ಪುನಃ ಕಡತದಲ್ಲಿ ಸೇರಿಬಿಟ್ಟಿತ್ತು. ಕಳೆದ ಜೂನ್ ತಿಂಗಳಲ್ಲಿ ನಕ್ಸಲಿ ವಿರೋಧಿ ಪಡೆಯು ತನ್ನ ಕಾರ್ಯಚರಣೆ ಮುಗಿಸಿಕೊಂಡು ದೋಣಿಯಲ್ಲಿ ನದಿ ದಾಟುತ್ತಿದ್ದಾಗ ನಕ್ಸಲಿಯರ ಗುಂಡಿನ ಸುರಿಮಳೆಗೆ ಸಿಲುಕಿಕೊಂಡು ಒಟ್ಟು 66 ಮಂದಿ ಹತರಾದರು. ಅವರಲ್ಲಿ 36 ಮಂದಿ ನಕ್ಸಲ್ ವಿರೋಧಿ ಪಡೆಯ ಯೋಧರೂ ಸೇರಿದ್ದಾರೆ. ಈ ನರಮೇಧದಿಂದ ಎಚ್ಚೆತ್ತುಕೊಂಡ ಸರ್ಕಾರ ಸೇತುವೆ ನಿರ್ಮಾಣಕ್ಕೆ ಒತ್ತು ಕೊಟ್ಟಿದೆ. ಸೇತುವೆ ನಿರ್ಮಾಣದ ಕಾರ್ಯವನ್ನು ಸೇನಾ ಪಡೆಗೆ ವಹಿಸುವ ಪ್ರಸ್ತಾಪ ಮಾಡಲಾಗಿದೆ. ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷದ ಮೇಲಾಗಿದೆ. 15 ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿವೆ. ಅಭಿವೃದ್ದಿವಂಚಿತ ಇಂತಹ ಪ್ರದೇಶಗಳು ದೇಶದ ಇಷ್ಟು ವರ್ಷಗಳ ಸಾಧನೆಯನ್ನು ಅಣಕಿಸುತ್ತಿವೆ. ಇದೊಂದೇ ಇಂತಹ ಪ್ರದೇಶವಲ್ಲ. ಚುನಾವಣ ವರದಿಗಳ ಮದ್ಯೆ ಮೂಲ ಸೌಲಭ್ಯ ವಂಚಿತ, ನಿರ್ಲಕ್ಷ್ಯಕ್ಕೊಳಗಾಗಿರುವ ಹಳ್ಳಿಗಳ ವರದಿಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಹಳ್ಳಿಗಳ ಜನರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಗಂಗಾ ನದಿಯ ಸುಮಾರು 24 ದ್ವೀಪಗಳಲ್ಲಿ ಅಂದಾಜು ಒಂದು ಲಕ್ಷ ಜನ ವಾಸಿಸುತ್ತಿದ್ದಾರೆ. ಆ ದ್ವೀಪಗಳು ಭಾರತಕ್ಕೆ ಸೇರಿದವು ಎಂಬುದರಲ್ಲಿ ಅನುಮಾನ ಇಲ್ಲ, ಯಾರದೂ ತಕರಾರಿಲ್ಲ. ಆದರೆ ಇಲ್ಲಿಯ ವಾಸಿಗಳು ಒಂದು ರೀತಿಯಲ್ಲಿ ’ಅನಾಥ’ರು. ಏಕೆಂದರೆ ಇವರು ಯಾವ ರಾಜ್ಯಕ್ಕೆ ಸೇರಿದವರು ಎಂದು ಹೇಳುವವರು ಯಾರು ಇಲ್ಲ. ಬಹಳ ವರ್ಷಗಳಿಂದ ಇವರು ಮತದಾನದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಕಾರಣ :ಮತದಾರರ ಪಟ್ಟಿಯಲ್ಲೂ ಇವರ ಹೆಸರಿಲ್ಲ. ಇವರ ಸಮಸ್ಯೆಯ ವರದಿ ಇಲ್ಲಿದೆ.

ಇದುವರೆಗೆ ನಾವು ಸಾಧಿಸಿರುವ ಸಾಧನೆಯ ಗುಣಮಟ್ಟ ಎಂತಹದು? ಅಭಿವೃದ್ದಿಯಿಂದ ನಿಜವಾಗಿಯು ಎಷ್ಟು ಜನಕ್ಕೆ ಫಲ ಸಿಕ್ಕಿದೆ? ಅಸಮತೋಲನ ಸರಿಪಡಿಸುವುದು ಹೇಗೆ ? ಈ ಬಗ್ಗೆ ಮತ್ತು ನಮ್ಮ ಅಭಿವೃದ್ದಿ ನೀತಿಯ ಬಗ್ಗೆ ನಾವು ಚಿಂತಿಸದಿದ್ದರೆ ಮುಂದೊಂದು ದಿನ ನಮ್ಮ ದೇಶದ ಅಖಂಡತೆಗೆ ಧಕ್ಕೆಯಾದರೆ ಆಶ್ಚರ್ಯಪಡಬೇಕಿಲ್ಲ.

ಚಿತ್ರ : ಏ ಜೆ ಜೆ