Sunday, April 19, 2009

ದೀಪದ ಕೆಳಗಿನ ಕತ್ತಲ ಕರಾಳತೆ!!


ಆ ನತದೃಷ್ಟ ಭೂಭಾಗದ ಅಧಿಕೃತ ಹೆಸರೇ cut-off point! ಇದು ಮೂರು ಕಡೆಯಿಂದ ಜಲಾವೃತ ಗುಡ್ದಗಾಡು ಪ್ರದೇಶ. ಸುಮಾರು 151 ಸಣ್ಣ ಹಳ್ಳಿ ಅಥವ ಕೊಪ್ಪಲುಗಳನ್ನು ಹೊಂದಿರುವ ಈ ಪ್ರದೇಶದಿಂದ ಪಟ್ಟಣ್ಣಕ್ಕೆ ಬರಬೇಕೆಂದರೆ ಇಲ್ಲಿ ಸಿಗುವ ಏಕೈಕ ಮೋಟಾರು ದೋಣಿ (launch)ಯೇ ಗತಿ. ಸುಮಾರು 25000 ದಷ್ಟು ಜನಸಂಖ್ಯೆಯುಳ್ಳ ಇದು ಒರಿಸ್ಸಾದ ಮಲಕಾನ್‍ಗಿರಿ ಜಿಲ್ಲೆಯಲ್ಲಿದೆ. ಇಲ್ಲಿಯವರೆಲ್ಲ ಗಿರಿಜನರೇ. ಇಲ್ಲಿ ಯಾರಿಗಾದರು ಮಲೇರಿಯಾದಂತಹ ಕಾಯಿಲೆ ತಗುಲಿದರೆ ಚಿಕಿತ್ಸೆಗಾಗಿ 30 ಕಿ ಮೀ ದೂರ ದೋಣಿಯಲ್ಲಿ ಬರಬೇಕು. ದೋಣಿ ಸಿಗಲು ಸುಮಾರು ಹತ್ತು ಕಿ ಮೀ ನಡೆದುಕೊಂಡು ಬರಬೇಕು. ಆ ದೋಣಿಯು ಪಟ್ಟಣದಿಂದ ಬರುವುದೇ ದಿನಕ್ಕೆ ಒಂದು ಹೊತ್ತು!

ತನ್ನ ಮಗ್ಗುಲಲ್ಲೇ ವರ್ಷಕ್ಕೆ 720 m w ವಿದ್ಯುತ್ ಉತ್ಪಾದಿಸುವ ಬಾಲಿಮೇಲ ಜಲವಿದ್ಯುದ್ಗಾರ ಇದ್ದರೂ ಒಮ್ಮೆಯೂ ಈ ಪ್ರದೇಶ ವಿದ್ಯುತ್‍ಚ್ಛಕ್ತಿಯನ್ನು ಕಂಡಿಲ್ಲ. ಇಲ್ಲಿಯ ಒಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ಇದುವರೆಗು ವಿದ್ಯುತ್ ದೀಪವೇ ಬಳಸಿಲ್ಲ!
1960 ರಲ್ಲಿ ಈ ಜಲವಿದ್ಯುತ್ ಯೋಜನೆಗಾಗಿ 91 ಹಳ್ಳಿಗಳು ಮುಡುಗಡೆಯಾಗಿವೆ. 1200 ಕುಟುಂಬಗಳು ಸ್ಥಳಾಂತರಗೊಂಡಿವೆ. ಅಂದಿನಿಂದ ಇಂದಿನವರೆಗೂ ಈ ಪ್ರದೇಶ ಕಡೆಗಣಿಸಲ್ಪಟ್ಟಿದೆ. ಅಭಿವೃದ್ದಿ ಯೋಜನೆಗಳಿಗೆ ಸಕಲವನ್ನೂ ತ್ಯಾಗ ಮಾಡಿರುವ ಇಲ್ಲಿಯವರಿಗೆ ಆ ಅಭಿವೃದ್ದಿಯ ಒಂದಂಷದಷ್ಟೂ ಫಲ ದಕ್ಕಿಲ್ಲ. ಬದಲಿಗೆ ಇನ್ನೂ ಹಿಂದುಳಿದುಬಿಟ್ಟಿದ್ದಾರೆ. ಒಮ್ಮೆ ಈ ಪ್ರದೇಶಕ್ಕೆ ಸಂಬಂಧಿಸಿದ ಯಾವುದೋ ಸಮೀಕ್ಷೆಗಾಗಿ ಬಂದ ಸರ್ಕಾರಿ ಅಧಿಕಾರಿಗಳ ತಂಡ ಹಳ್ಳಿ ಒಳಗೆ ಬರದೆ 20 ಕಿ ಮೀ ದೂರದಲ್ಲೇ ನದಿ ದಂಡೆಯಲ್ಲಿ ಠಿಕಾಣಿ ಹೂಡಿ ಅಲ್ಲಿಗೇ ಇಲ್ಲಿಯ ನಿವಾಸಿಗಳನ್ನು ಕಾಲ್ನಡಿಗೆಯಲ್ಲಿ ಕರೆಸಿಕೊಂಡಿದ್ದರಂತೆ. ಇಲ್ಲಿಯವರು ಎಷ್ಟರಮಟ್ಟಿಗೆ ಕಡೆಗಣಿಸಲ್ಪಟ್ಟಿದ್ದಾರೆಂಬುದಕ್ಕೆ ಇದೊಂದು ಉದಾಹರಣೆ.

ಪತ್ರಕರ್ತ ಪಿ.ಸಾಯಿನಾಥ್ ತಮ್ಮ 'Everybody loves a good drought' ಪುಸ್ತಕದಲ್ಲಿ ಈ ಪ್ರದೇಶದ ಬಗ್ಗೆ ಬರೆದಿದ್ದಾರೆ.

ಇತ್ತೀಚಿಗೆ ಮೊದಲ ಹಂತದ ಚುನಾವಣೆ ವೇಳೆ ನಕ್ಸಲಿಯರ ಹಿಂಸಾಚಾರ ನಡೆದ ಸ್ಥಳಗಳಲ್ಲಿ ಈ ಪ್ರದೇಶವೂ ಒಂದು. ಸುಮಾರು 7-8 ವರ್ಷಗಳಿಂದ ಇಲ್ಲಿ ನಕ್ಸಲರು ಬಲವಾಗಿ ಬೇರೂರಿದ್ದಾರೆ. ಇದು ಅವರ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಜಾಗದಂತಿದೆ. ಇಷ್ಟು ವರ್ಷಗಳಲ್ಲಿ ಹೋದ ವರ್ಷದವರೆಗೂ ಇಲ್ಲಿ ಒಂದೇ ಒಂದು ಪೋಲಿಸ್ ಠಾಣೆ ಅಥವ ಉಪ ಪೋಲಿಸ್ ಠಾಣೆಯಾಗಲಿ ಇರಲಿಲ್ಲ! ಕಳೆದ ಮೆ ತಿಂಗಳ್ಳಲ್ಲಷ್ಟೆ ಇಲ್ಲಯ ಒಂದು ಹಳ್ಳಿಯಲ್ಲಿ ಒಂದು ಠಾಣೆಯನ್ನು ತೆರೆಯಲಾಗಿದೆ. ಇದರಿಂದ ಸುಮಾರು 75 ಹಳ್ಳಿಗಳಿಗೆ ಅನುಕೂಲ ವಾಗುತ್ತೆ. ಆದರೆ ಉಳಿದ ಹಳ್ಳಿಗಳಿಗೆ 35 ಕಿ ಮೀ ದೂರದ ಊರಿನ ಠಾಣೆಯೇ ಗತಿ.

ಇಲ್ಲಿ ಹರಿಯುವ ಗುರುಪ್ರಿಯ ನದಿಗೆ ಸೇತುವೆ ನಿರ್ಮಿಸಿದರೆ ಈ ಪ್ರದೇಶದ ಸಂಚಾರ ಸಮಸ್ಯೆ ಬಹಳಷ್ಟು ಬಗೆಹರಿದು ಇಲ್ಲಿಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದರೆ ಸೇತುವೆಯ ಪ್ರಸ್ತಾಪ ಕಳೆದ ವರ್ಷದವರೆಗೆ ಕೇವಲ ಕಾಗದ ಮೇಲಷ್ಟೆ ಇತ್ತು. ಒಮ್ಮೆ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಖಾಸಗಿ ನಿರ್ಮಾಣ ಸಂಸ್ಥೆಗೆ ನೀಡಲಾಗಿತ್ತು. ಆದರೆ ನಕ್ಸಲರ ಉಪಟಳದಿಂದಾಗಿ ಆ ಕಾರ್ಯ ಸ್ಥಗಿತವಾಯಿತು. ಸೇತುವೆ ನಿರ್ಮಾಣ ಯೋಜನೆ ಪುನಃ ಕಡತದಲ್ಲಿ ಸೇರಿಬಿಟ್ಟಿತ್ತು. ಕಳೆದ ಜೂನ್ ತಿಂಗಳಲ್ಲಿ ನಕ್ಸಲಿ ವಿರೋಧಿ ಪಡೆಯು ತನ್ನ ಕಾರ್ಯಚರಣೆ ಮುಗಿಸಿಕೊಂಡು ದೋಣಿಯಲ್ಲಿ ನದಿ ದಾಟುತ್ತಿದ್ದಾಗ ನಕ್ಸಲಿಯರ ಗುಂಡಿನ ಸುರಿಮಳೆಗೆ ಸಿಲುಕಿಕೊಂಡು ಒಟ್ಟು 66 ಮಂದಿ ಹತರಾದರು. ಅವರಲ್ಲಿ 36 ಮಂದಿ ನಕ್ಸಲ್ ವಿರೋಧಿ ಪಡೆಯ ಯೋಧರೂ ಸೇರಿದ್ದಾರೆ. ಈ ನರಮೇಧದಿಂದ ಎಚ್ಚೆತ್ತುಕೊಂಡ ಸರ್ಕಾರ ಸೇತುವೆ ನಿರ್ಮಾಣಕ್ಕೆ ಒತ್ತು ಕೊಟ್ಟಿದೆ. ಸೇತುವೆ ನಿರ್ಮಾಣದ ಕಾರ್ಯವನ್ನು ಸೇನಾ ಪಡೆಗೆ ವಹಿಸುವ ಪ್ರಸ್ತಾಪ ಮಾಡಲಾಗಿದೆ. ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷದ ಮೇಲಾಗಿದೆ. 15 ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿವೆ. ಅಭಿವೃದ್ದಿವಂಚಿತ ಇಂತಹ ಪ್ರದೇಶಗಳು ದೇಶದ ಇಷ್ಟು ವರ್ಷಗಳ ಸಾಧನೆಯನ್ನು ಅಣಕಿಸುತ್ತಿವೆ. ಇದೊಂದೇ ಇಂತಹ ಪ್ರದೇಶವಲ್ಲ. ಚುನಾವಣ ವರದಿಗಳ ಮದ್ಯೆ ಮೂಲ ಸೌಲಭ್ಯ ವಂಚಿತ, ನಿರ್ಲಕ್ಷ್ಯಕ್ಕೊಳಗಾಗಿರುವ ಹಳ್ಳಿಗಳ ವರದಿಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಹಳ್ಳಿಗಳ ಜನರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಗಂಗಾ ನದಿಯ ಸುಮಾರು 24 ದ್ವೀಪಗಳಲ್ಲಿ ಅಂದಾಜು ಒಂದು ಲಕ್ಷ ಜನ ವಾಸಿಸುತ್ತಿದ್ದಾರೆ. ಆ ದ್ವೀಪಗಳು ಭಾರತಕ್ಕೆ ಸೇರಿದವು ಎಂಬುದರಲ್ಲಿ ಅನುಮಾನ ಇಲ್ಲ, ಯಾರದೂ ತಕರಾರಿಲ್ಲ. ಆದರೆ ಇಲ್ಲಿಯ ವಾಸಿಗಳು ಒಂದು ರೀತಿಯಲ್ಲಿ ’ಅನಾಥ’ರು. ಏಕೆಂದರೆ ಇವರು ಯಾವ ರಾಜ್ಯಕ್ಕೆ ಸೇರಿದವರು ಎಂದು ಹೇಳುವವರು ಯಾರು ಇಲ್ಲ. ಬಹಳ ವರ್ಷಗಳಿಂದ ಇವರು ಮತದಾನದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಕಾರಣ :ಮತದಾರರ ಪಟ್ಟಿಯಲ್ಲೂ ಇವರ ಹೆಸರಿಲ್ಲ. ಇವರ ಸಮಸ್ಯೆಯ ವರದಿ ಇಲ್ಲಿದೆ.

ಇದುವರೆಗೆ ನಾವು ಸಾಧಿಸಿರುವ ಸಾಧನೆಯ ಗುಣಮಟ್ಟ ಎಂತಹದು? ಅಭಿವೃದ್ದಿಯಿಂದ ನಿಜವಾಗಿಯು ಎಷ್ಟು ಜನಕ್ಕೆ ಫಲ ಸಿಕ್ಕಿದೆ? ಅಸಮತೋಲನ ಸರಿಪಡಿಸುವುದು ಹೇಗೆ ? ಈ ಬಗ್ಗೆ ಮತ್ತು ನಮ್ಮ ಅಭಿವೃದ್ದಿ ನೀತಿಯ ಬಗ್ಗೆ ನಾವು ಚಿಂತಿಸದಿದ್ದರೆ ಮುಂದೊಂದು ದಿನ ನಮ್ಮ ದೇಶದ ಅಖಂಡತೆಗೆ ಧಕ್ಕೆಯಾದರೆ ಆಶ್ಚರ್ಯಪಡಬೇಕಿಲ್ಲ.

ಚಿತ್ರ : ಏ ಜೆ ಜೆ

4 comments:

  1. ಪ್ರೀತಿಯ ಜಾವೀದ್,

    ಈ ವಿಷಯ ಓದಿದ ಮೇಲೆ "ಯಾರಿಗೆ ಬ೦ತು ಎಲ್ಲಿಗೆ ಬ೦ತು ೪೭ ರ ಸ್ವಾತ೦ತ್ರ್ಯ" ಅ೦ತ ಅನ್ನಿಸದೇ ಇರಲಾರದು....

    ReplyDelete
  2. ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ ಬ್ಹುಶ್ರ ರ ಮೇಲೆ ಶೂ ಎಷೆತ ದಿಂದ ಪ್ರಾರಂಭ ವಾಗಿ ದಿನೇ ದಿನೇ ಪ್ರಕರಣ ಗಳು ಹೆಚ್ಚುತ್ತಾಇವೆ .ಯುವಜನತೆ ಅಭಿವ್ರದ್ಧಿ ಮತ್ತು ಭವಿಷ್ಯದ ಬಗ್ಗೆ ಜಾಗರಿಕರಗಿರುವುದರಿಂದ ರಾಜಕಾರಣಿಗಳ ಪೊಳ್ಳು ಆಶ್ವಾಸನೆ ಗೆ ಬೇಸರ ಬಂದು ತಮ್ಮ ವಿರೋಧ ಪ್ರಕಟಿಸುವ ರೀತಿ ಇದಾಗಿದೆ .
    ಆದರೆ ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಖಂಡಿಸುತ್ತಿದೆ .ಬೇರೆ ಉಪಾಯ ಹುಡುಕಿ ಸ್ವಾರ್ಥ ರಾಜಕಾರಣಿ ಗಳಿಗೆ ಪಾಟ ಕಲಿಸ ಬೇಕು .
    ಕುಂದಾಪುರ ನಾಗೇಶ್ ಪೈ

    ReplyDelete
  3. ಜಾವೀದ್,

    ಮೊದಲ ಬರಹದಲ್ಲೇ....ಸಾಧಿಸಿದ್ದೀರಿ....ನಿಜಕ್ಕೂ ತುಂಬಾ ಉಪಯುಕ್ತಮಾಹಿತಿಯುಳ್ಳ ಮತ್ತ್ತು ಕಳಕಳಿ, ಕಾಳಜಿಯುಳ್ಳ ಬರಹ ಈ ಪ್ರದೇಶದ ವಿಚಾರವೇ ನನಗೆ ಗೊತ್ತಿರಲಿಲ್ಲ. ಇದನ್ನು ಮೊದಲು ಬರೆದವರಿಗೂ ಅದನ್ನು ಅನುವಾದಿಸಿದ ನಿಮಗೂ ಅಭಿನಂದನೆಗಳು....

    ನಿಮಗೂ ಬರವಣಿಗೆಯ ಶಕ್ತಿಯಿದೆ ಅಂತ ಗೊತ್ತಾಗುತ್ತೆ...ಮುಂದುವರಿಸಿ...

    ಧನ್ಯವಾದಗಳು...

    ReplyDelete
  4. ಶಿವು,
    ಧನ್ಯವಾದಗಳು; ನಿಮ್ಮ ಭೇಟಿಗೆ, ಮೆಚ್ಚುಗೆಗೆ ಹಾಗು ಪ್ರೋತ್ಸಾಹದ ನುಡಿಗಳಿಗೆ. ಸಲಹೆಗಳಿಗೂ ತೆರೆದ ಮನಸ್ಸಿನ ಸ್ವಾಗತವಿದೆ.

    ನಿಮ್ಮ ಏ ಜೆ ಜೆ

    ReplyDelete