Sunday, April 26, 2009

"ಒಂದೊಂದ್ ವರ್ಸಕ್ಕೆ ಒಂದೊಂದ್ ಇಲೆಕ್ಸನ್ ಆಗ್ಬೇಕು, ದೇಶಕ್ ಒಳ್ಳೆದಾಗುತ್ತೆ!!"


ಯಜಮಾನ್ರೆ, ನಿಮ್ಮ ಕಡೆ ಹೇಗಿದೆ ಎಲೆಕ್ಶನ್ ಗಲಾಟೆ?
"ಹಿ, ಹೀ ಬಿಡಿ ಸ್ವಾಮಿ. ನಿಮಗೇನ್ ಗೊತ್ತಿಲ್ಲದ್ ವಿಷ್ಯನಾ ಅದು?"
ಸ್ವಲ್ಪ ಸಂಕೋಚದಿಂದಲೇ ಬಂತು ಉತ್ತರ. ಅದರ ಜೊತೆಗೆ 'ತೀರ್ಥ'ದ ವಾಸನೆಯೂ ಸಹ!
ನಿಮ್ ಪ್ರಕಾರ ಯಾರ‍್ದ್ ಬರುತ್ತೆ ಸರ್ಕಾರ?
"ಎಲ್ಲಾರ್ದು ಸ್ವಾಮಿ"
ಎಲ್ಲಾರ್ದು ಅಂದ್ರೆ?
"ಎಲ್ಲಾ ಪಕ್ಷಗಳದ್ದು. ಚಿತ್ರನ್ನ ಸರ್ಕಾರ.ಹಿ ಹೀ"
ಈಗೀಗ ಬರುವ ಸರ್ಕಾರಗಳೆಲ್ಲ ಯಾಕೆ ಚಿತ್ರನ್ನ ಸರ್ಕಾರಗಳು?
"ಪಾಪ, ಇಲೆಕ್ಸನ್‍ನಾಗೆ ಎಲ್ಲಾ ಪಕ್ಷದವ್ರೂ ಹಣ, ಹೆಂಡ ಹಂಚ್ತಾರಲ್ವಾ? ಅದಕ್ಕೆ ಎಲ್ರಿಗೂ ಅಧಿಕಾರ ಒಂದಿಂದಿಷ್ಟು ಸಿಗ್ಲಿ ಅಂತ ನಾವೇ ಅ ತರ ಸರ್ಕಾರಗಳು ಬರೋ ಹಾಗ್ ಮಾಡ್ತೀವಿ"
ನಾವೇ ಅಂದ್ರೆ?
"ವೋಟ್ ಹಾಕೊರು"

ಒಳ್ಳೆ interesting ಆಸಾಮಿನೇ ಸಿಕ್ಕಿದ್ದಾನೆ ನನಗೆ. ಆದ್ರೆ 'ತೀರ್ಥ'ದ ಪ್ರಭಾವ. ಸರಿಯಾಗಿ ನಿಲ್ಲಲ್ಲು ಆಗುತ್ತಿರಲಿಲ್ಲ. ಅದಕ್ಕೆ ಅಲ್ಲೇ ಪಕ್ಕದಲ್ಲಿದ್ದ ಶಾಲೆ ಆವರಣದಲ್ಲಿ ಕರೆದು ಕೊಂಡು ಹೋಗಿ ಕುಳ್ಳಿರಿಸಿಕೊಂಡೆ.

ಈ ತರಹ ಚಿತ್ರನ್ನಾ ಸರ್ಕಾರ ಬಂದ್ರೆ ಅವ್ರವ್ರೆ ಕಿತ್ತಾಡಿ ಇನ್ನೊಂದ್ ಎಲೆಕ್ಶನ್ ಬರೊ ಹಾಗೆ ಮಾಡ್ತಾರಲ್ವ?
"ಆಗ್ಲಿ ಬುಡಿ! ಒಂದೊಂದ್ ವರ್ಸಕ್ಕೆ ಒಂದೊಂದ್ ಇಲೆಕ್ಸನ್ ಆಗ್ಬೇಕು....................."
ಹಾಗಾದ್ರೆ ಖಜಾನೆಲಿ ಎಲ್ಲ್ ದುಡ್ಡ್ ಉಳಿಯುತ್ತೆ?
"ದುಡ್ಡಿಗ್ ಏನ್ ಬರಾ ಸಾಮಿ? ಇಷ್ಟ್ ವರ್ಸ ತಿಂದಿಲ್ವಾ? ಕಕ್‍ಲಿ ಬಿಡಿ..........."
ನಾನ್ ಹೇಳಿದ್ದು ಸರ್ಕಾರದ್ ಖಜಾನೆ........
"ಅಯ್ಯೋ ಬುಡಿ ಸಾಮಿ! ಇಲೆಕ್ಸನ್ ಆಗ್ಲಿ ಆಗ್ದಲೆ ಇರ್ಲಿ ಅದು ಕಾಲಿ ಆಗೋದು ಇದ್ದೆ ಇದೆ. ನಾವು ಓಟ್ ಹಾಕಿ ಕಳ್ಸಿದವ್ರು ಖಾಲಿ ಮಾಡ್ದೆ ಇರ್ತಾರ? ಅವಾಗ್ ಅವಗಾ ಇಲೆಕ್ಸನ್ ಬಂದ್ರೆ ಒಳ್ಳೆದೆ!!"
ನಿಮ್ಗೆಲ್ಲ ಕುಡಿಯೊಕೆ ಹೆಂಡ, ಖರ್ಚಿಗೆ ದುಡ್ಡು ಸಿಗುತ್ತಲ್ಲಾ ಅದಕ್ಕ?
"ಏ ಹೋಗಿ ಸಾಮಿ. ನೀವ್ ಜಾಸ್ತಿ ತಿಳ್ದವರಲ್ಲ. ಇಲೆಕ್ಸನ್ ಬಂದ್ರೆ ಜನ್ರ ಕೈಗೆ ವಸಿ ಕೆಲ್ಸ ಸಿಗುತ್ತೆ. ಈಗ್ ನೋಡಿ ನಾವ್ ಇಲ್ಲಿ ಕೂತಿದಿವಲ್ಲ ಇಲ್ಲಿ ನಮ್ಮಿಬ್ರನ್ನು ಬಿಟ್ಟೂ ಇನ್ನ್ಯಾರ್ದ್ರು ಕಾಣಿಸ್ತಾರ?........."
"ಕಾಣಿಸ್ತಾರ ಹೇಳಿ ಸಾಮಿ"
ಇಲ್ಲ. ಯಾಕೆ?
"ಇಲೆಕ್ಸನ್ ಬರೊದಕ್ ಮೊದ್ಲು ಇಲ್ಲೆ ನಮ್ಮೂರ ಎಲ್ಲಾ ಪುಂಡ್‍ ನನ್‍ಮಕ್‍ಳು ಏನು ಕೆಲ್ಸ ಇಲ್ದೆ ಇಸ್ಪೀಟ್ ಆಡ್ಕೊಂಡು ದಾರಿಲಿ ಹೋಗ್ ಬರೋ ಹೆಣ್ ಮಕ್ಳಿಗೆ ಚುಡಾಯಿಸ್ಕೊಂಡು ಉರಿನ್ ನೆಮ್ದಿ ಹಾಳ್ ಮಾಡ್ತಿದ್ರು.. ಈಗ ಯಾವ್‍ದ್ಯಾವ್ದೊ ಪಕ್ಷದವ್ರ್ ಹಿಂದೆ ಸುತ್‍ತ್ತಿದ್ದಾರೆ. ಎಲೆಕ್ಸನ್ ಮುಗಿಯೊವರ್ಗೆ ಇಲ್ಲಿ ವಸಿ ನೆಮ್ದಿ ಇರುತ್ತೆ"
"ಇನ್ನೊಂದ್ ವಿಸ್ಯ. ಆಗಾಗ್ ಇಲೆಕ್ಸನ್ ಬಂದ್ರೆ ಈ ರಾಜ್‍ಕಾರ‍್ನಿಗಳ್ ಹತ್ರ ಕಾಸ್ ಎಲ್ಲಾ ಕಾಲಿಯಾಗ್ಬಿಡುತ್ತೆ. ಆಗ ಈಗ್ ಹಂಚ್‍ತವ್ರಲ್ಲಾ ಹಂಗೆ ಹಂಚಕ್ಕೆ ಎಲ್ಲಿರುತ್ತೆ ದುಡ್ಡು? ಎಲ್ಲಾ ಪಕ್ಸದವ್ರುದು ಒಂದೇ ಗತಿ ಆಗುತ್ತೆ. ಆಗ್ ನೋಡಿ ಸರಿ ದಾರಿಗ್ ಬರ್ತಾರೆ. ವೋಟ್ ಕರೀದಿಗೆ ಕಾಸೇ ಇಲ್ಲ ಅಂದ್ಮೇಲೆ ನಮ್‍ಂತೊರಿಗೆ ತಲೆ ಕೆಡ್‍ಸೊಕೆ ಎಲ್ ಆಗುತ್ತೆ. ಆಗ ಜನ್ರ ಕೆಲ್ಸ ಸರಿ ಮಾಡಿದವ್‍ರಿಗೆ ಮಾತ್ರ ಓಟ್ ಬೀಳ್ತಾವೆ."

("ತಿರ್ಥ' ಒಳಗೆ ಹೋದ್ರೆ ಸತ್ಯ ಎಲ್ಲಾ ಹೊರಗೆ ಬರುತ್ತಂತೆ. ಈ ಆಸಾಮಿಯನ್ನು ಸಂದಂರ್ಶಿಸಿದ ಮೇಲೆ ಅದು ನಿಜ ಅನ್ನಿಸುತ್ತಿದೆ.-- ಸಂದರ್ಶಕ)

ಚಿತ್ರ : ಏ ಜೆ ಜೆ

Sunday, April 19, 2009

ದೀಪದ ಕೆಳಗಿನ ಕತ್ತಲ ಕರಾಳತೆ!!


ಆ ನತದೃಷ್ಟ ಭೂಭಾಗದ ಅಧಿಕೃತ ಹೆಸರೇ cut-off point! ಇದು ಮೂರು ಕಡೆಯಿಂದ ಜಲಾವೃತ ಗುಡ್ದಗಾಡು ಪ್ರದೇಶ. ಸುಮಾರು 151 ಸಣ್ಣ ಹಳ್ಳಿ ಅಥವ ಕೊಪ್ಪಲುಗಳನ್ನು ಹೊಂದಿರುವ ಈ ಪ್ರದೇಶದಿಂದ ಪಟ್ಟಣ್ಣಕ್ಕೆ ಬರಬೇಕೆಂದರೆ ಇಲ್ಲಿ ಸಿಗುವ ಏಕೈಕ ಮೋಟಾರು ದೋಣಿ (launch)ಯೇ ಗತಿ. ಸುಮಾರು 25000 ದಷ್ಟು ಜನಸಂಖ್ಯೆಯುಳ್ಳ ಇದು ಒರಿಸ್ಸಾದ ಮಲಕಾನ್‍ಗಿರಿ ಜಿಲ್ಲೆಯಲ್ಲಿದೆ. ಇಲ್ಲಿಯವರೆಲ್ಲ ಗಿರಿಜನರೇ. ಇಲ್ಲಿ ಯಾರಿಗಾದರು ಮಲೇರಿಯಾದಂತಹ ಕಾಯಿಲೆ ತಗುಲಿದರೆ ಚಿಕಿತ್ಸೆಗಾಗಿ 30 ಕಿ ಮೀ ದೂರ ದೋಣಿಯಲ್ಲಿ ಬರಬೇಕು. ದೋಣಿ ಸಿಗಲು ಸುಮಾರು ಹತ್ತು ಕಿ ಮೀ ನಡೆದುಕೊಂಡು ಬರಬೇಕು. ಆ ದೋಣಿಯು ಪಟ್ಟಣದಿಂದ ಬರುವುದೇ ದಿನಕ್ಕೆ ಒಂದು ಹೊತ್ತು!

ತನ್ನ ಮಗ್ಗುಲಲ್ಲೇ ವರ್ಷಕ್ಕೆ 720 m w ವಿದ್ಯುತ್ ಉತ್ಪಾದಿಸುವ ಬಾಲಿಮೇಲ ಜಲವಿದ್ಯುದ್ಗಾರ ಇದ್ದರೂ ಒಮ್ಮೆಯೂ ಈ ಪ್ರದೇಶ ವಿದ್ಯುತ್‍ಚ್ಛಕ್ತಿಯನ್ನು ಕಂಡಿಲ್ಲ. ಇಲ್ಲಿಯ ಒಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ಇದುವರೆಗು ವಿದ್ಯುತ್ ದೀಪವೇ ಬಳಸಿಲ್ಲ!
1960 ರಲ್ಲಿ ಈ ಜಲವಿದ್ಯುತ್ ಯೋಜನೆಗಾಗಿ 91 ಹಳ್ಳಿಗಳು ಮುಡುಗಡೆಯಾಗಿವೆ. 1200 ಕುಟುಂಬಗಳು ಸ್ಥಳಾಂತರಗೊಂಡಿವೆ. ಅಂದಿನಿಂದ ಇಂದಿನವರೆಗೂ ಈ ಪ್ರದೇಶ ಕಡೆಗಣಿಸಲ್ಪಟ್ಟಿದೆ. ಅಭಿವೃದ್ದಿ ಯೋಜನೆಗಳಿಗೆ ಸಕಲವನ್ನೂ ತ್ಯಾಗ ಮಾಡಿರುವ ಇಲ್ಲಿಯವರಿಗೆ ಆ ಅಭಿವೃದ್ದಿಯ ಒಂದಂಷದಷ್ಟೂ ಫಲ ದಕ್ಕಿಲ್ಲ. ಬದಲಿಗೆ ಇನ್ನೂ ಹಿಂದುಳಿದುಬಿಟ್ಟಿದ್ದಾರೆ. ಒಮ್ಮೆ ಈ ಪ್ರದೇಶಕ್ಕೆ ಸಂಬಂಧಿಸಿದ ಯಾವುದೋ ಸಮೀಕ್ಷೆಗಾಗಿ ಬಂದ ಸರ್ಕಾರಿ ಅಧಿಕಾರಿಗಳ ತಂಡ ಹಳ್ಳಿ ಒಳಗೆ ಬರದೆ 20 ಕಿ ಮೀ ದೂರದಲ್ಲೇ ನದಿ ದಂಡೆಯಲ್ಲಿ ಠಿಕಾಣಿ ಹೂಡಿ ಅಲ್ಲಿಗೇ ಇಲ್ಲಿಯ ನಿವಾಸಿಗಳನ್ನು ಕಾಲ್ನಡಿಗೆಯಲ್ಲಿ ಕರೆಸಿಕೊಂಡಿದ್ದರಂತೆ. ಇಲ್ಲಿಯವರು ಎಷ್ಟರಮಟ್ಟಿಗೆ ಕಡೆಗಣಿಸಲ್ಪಟ್ಟಿದ್ದಾರೆಂಬುದಕ್ಕೆ ಇದೊಂದು ಉದಾಹರಣೆ.

ಪತ್ರಕರ್ತ ಪಿ.ಸಾಯಿನಾಥ್ ತಮ್ಮ 'Everybody loves a good drought' ಪುಸ್ತಕದಲ್ಲಿ ಈ ಪ್ರದೇಶದ ಬಗ್ಗೆ ಬರೆದಿದ್ದಾರೆ.

ಇತ್ತೀಚಿಗೆ ಮೊದಲ ಹಂತದ ಚುನಾವಣೆ ವೇಳೆ ನಕ್ಸಲಿಯರ ಹಿಂಸಾಚಾರ ನಡೆದ ಸ್ಥಳಗಳಲ್ಲಿ ಈ ಪ್ರದೇಶವೂ ಒಂದು. ಸುಮಾರು 7-8 ವರ್ಷಗಳಿಂದ ಇಲ್ಲಿ ನಕ್ಸಲರು ಬಲವಾಗಿ ಬೇರೂರಿದ್ದಾರೆ. ಇದು ಅವರ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಜಾಗದಂತಿದೆ. ಇಷ್ಟು ವರ್ಷಗಳಲ್ಲಿ ಹೋದ ವರ್ಷದವರೆಗೂ ಇಲ್ಲಿ ಒಂದೇ ಒಂದು ಪೋಲಿಸ್ ಠಾಣೆ ಅಥವ ಉಪ ಪೋಲಿಸ್ ಠಾಣೆಯಾಗಲಿ ಇರಲಿಲ್ಲ! ಕಳೆದ ಮೆ ತಿಂಗಳ್ಳಲ್ಲಷ್ಟೆ ಇಲ್ಲಯ ಒಂದು ಹಳ್ಳಿಯಲ್ಲಿ ಒಂದು ಠಾಣೆಯನ್ನು ತೆರೆಯಲಾಗಿದೆ. ಇದರಿಂದ ಸುಮಾರು 75 ಹಳ್ಳಿಗಳಿಗೆ ಅನುಕೂಲ ವಾಗುತ್ತೆ. ಆದರೆ ಉಳಿದ ಹಳ್ಳಿಗಳಿಗೆ 35 ಕಿ ಮೀ ದೂರದ ಊರಿನ ಠಾಣೆಯೇ ಗತಿ.

ಇಲ್ಲಿ ಹರಿಯುವ ಗುರುಪ್ರಿಯ ನದಿಗೆ ಸೇತುವೆ ನಿರ್ಮಿಸಿದರೆ ಈ ಪ್ರದೇಶದ ಸಂಚಾರ ಸಮಸ್ಯೆ ಬಹಳಷ್ಟು ಬಗೆಹರಿದು ಇಲ್ಲಿಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದರೆ ಸೇತುವೆಯ ಪ್ರಸ್ತಾಪ ಕಳೆದ ವರ್ಷದವರೆಗೆ ಕೇವಲ ಕಾಗದ ಮೇಲಷ್ಟೆ ಇತ್ತು. ಒಮ್ಮೆ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಖಾಸಗಿ ನಿರ್ಮಾಣ ಸಂಸ್ಥೆಗೆ ನೀಡಲಾಗಿತ್ತು. ಆದರೆ ನಕ್ಸಲರ ಉಪಟಳದಿಂದಾಗಿ ಆ ಕಾರ್ಯ ಸ್ಥಗಿತವಾಯಿತು. ಸೇತುವೆ ನಿರ್ಮಾಣ ಯೋಜನೆ ಪುನಃ ಕಡತದಲ್ಲಿ ಸೇರಿಬಿಟ್ಟಿತ್ತು. ಕಳೆದ ಜೂನ್ ತಿಂಗಳಲ್ಲಿ ನಕ್ಸಲಿ ವಿರೋಧಿ ಪಡೆಯು ತನ್ನ ಕಾರ್ಯಚರಣೆ ಮುಗಿಸಿಕೊಂಡು ದೋಣಿಯಲ್ಲಿ ನದಿ ದಾಟುತ್ತಿದ್ದಾಗ ನಕ್ಸಲಿಯರ ಗುಂಡಿನ ಸುರಿಮಳೆಗೆ ಸಿಲುಕಿಕೊಂಡು ಒಟ್ಟು 66 ಮಂದಿ ಹತರಾದರು. ಅವರಲ್ಲಿ 36 ಮಂದಿ ನಕ್ಸಲ್ ವಿರೋಧಿ ಪಡೆಯ ಯೋಧರೂ ಸೇರಿದ್ದಾರೆ. ಈ ನರಮೇಧದಿಂದ ಎಚ್ಚೆತ್ತುಕೊಂಡ ಸರ್ಕಾರ ಸೇತುವೆ ನಿರ್ಮಾಣಕ್ಕೆ ಒತ್ತು ಕೊಟ್ಟಿದೆ. ಸೇತುವೆ ನಿರ್ಮಾಣದ ಕಾರ್ಯವನ್ನು ಸೇನಾ ಪಡೆಗೆ ವಹಿಸುವ ಪ್ರಸ್ತಾಪ ಮಾಡಲಾಗಿದೆ. ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷದ ಮೇಲಾಗಿದೆ. 15 ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿವೆ. ಅಭಿವೃದ್ದಿವಂಚಿತ ಇಂತಹ ಪ್ರದೇಶಗಳು ದೇಶದ ಇಷ್ಟು ವರ್ಷಗಳ ಸಾಧನೆಯನ್ನು ಅಣಕಿಸುತ್ತಿವೆ. ಇದೊಂದೇ ಇಂತಹ ಪ್ರದೇಶವಲ್ಲ. ಚುನಾವಣ ವರದಿಗಳ ಮದ್ಯೆ ಮೂಲ ಸೌಲಭ್ಯ ವಂಚಿತ, ನಿರ್ಲಕ್ಷ್ಯಕ್ಕೊಳಗಾಗಿರುವ ಹಳ್ಳಿಗಳ ವರದಿಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಹಳ್ಳಿಗಳ ಜನರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಗಂಗಾ ನದಿಯ ಸುಮಾರು 24 ದ್ವೀಪಗಳಲ್ಲಿ ಅಂದಾಜು ಒಂದು ಲಕ್ಷ ಜನ ವಾಸಿಸುತ್ತಿದ್ದಾರೆ. ಆ ದ್ವೀಪಗಳು ಭಾರತಕ್ಕೆ ಸೇರಿದವು ಎಂಬುದರಲ್ಲಿ ಅನುಮಾನ ಇಲ್ಲ, ಯಾರದೂ ತಕರಾರಿಲ್ಲ. ಆದರೆ ಇಲ್ಲಿಯ ವಾಸಿಗಳು ಒಂದು ರೀತಿಯಲ್ಲಿ ’ಅನಾಥ’ರು. ಏಕೆಂದರೆ ಇವರು ಯಾವ ರಾಜ್ಯಕ್ಕೆ ಸೇರಿದವರು ಎಂದು ಹೇಳುವವರು ಯಾರು ಇಲ್ಲ. ಬಹಳ ವರ್ಷಗಳಿಂದ ಇವರು ಮತದಾನದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಕಾರಣ :ಮತದಾರರ ಪಟ್ಟಿಯಲ್ಲೂ ಇವರ ಹೆಸರಿಲ್ಲ. ಇವರ ಸಮಸ್ಯೆಯ ವರದಿ ಇಲ್ಲಿದೆ.

ಇದುವರೆಗೆ ನಾವು ಸಾಧಿಸಿರುವ ಸಾಧನೆಯ ಗುಣಮಟ್ಟ ಎಂತಹದು? ಅಭಿವೃದ್ದಿಯಿಂದ ನಿಜವಾಗಿಯು ಎಷ್ಟು ಜನಕ್ಕೆ ಫಲ ಸಿಕ್ಕಿದೆ? ಅಸಮತೋಲನ ಸರಿಪಡಿಸುವುದು ಹೇಗೆ ? ಈ ಬಗ್ಗೆ ಮತ್ತು ನಮ್ಮ ಅಭಿವೃದ್ದಿ ನೀತಿಯ ಬಗ್ಗೆ ನಾವು ಚಿಂತಿಸದಿದ್ದರೆ ಮುಂದೊಂದು ದಿನ ನಮ್ಮ ದೇಶದ ಅಖಂಡತೆಗೆ ಧಕ್ಕೆಯಾದರೆ ಆಶ್ಚರ್ಯಪಡಬೇಕಿಲ್ಲ.

ಚಿತ್ರ : ಏ ಜೆ ಜೆ