Monday, June 14, 2010

ಸಂತೆಯೊಳಗೆ ಏಕಾಂತ ಸುಖ ಅನುಭವಿಸುವ ಪ್ರಯತ್ನ

ಈ ಜಾಗತೀಕರಣ, ಉದಾರೀಕರಣ ಇವೆಲ್ಲಾ ಯಾರ ಮಿದುಳಿನ ಕೂಸುಗಳೋ? ಮಹಾಮಾರಿಯಂತೆ ಅಪ್ಪಳಿಸಿ ಬಿಟ್ಟಿವೆ. ಬದುಕುಗಳು ಅಲ್ಲೋಲ ಕಲ್ಲೋಲವಾಗಿಬಿಟ್ಟಿವೆ. ಪಟ್ಟಣಗಳು ಹಳ್ಳೀಗಳ್ಳನ್ನು ಕಬಳಿಸುತ್ತಿರುವ ಈ ಕಾಲದಲ್ಲಿ ಪ್ರಪಂಚವೇ ಒಂದು ಗ್ರಾಮವಂತೆ! ಮನುಷ್ಯ ಮನುಷ್ಯನಾಗಿ ಉಳಿದಿಲ್ಲ, ಮಷೀನುಗಳ ಹಿಡಿತಕ್ಕೆ ಸಿಲುಕಿ ತನಗರಿವಿಲ್ಲದಂತೆ ನಲುಗಿ ಹೋಗಿದ್ದಾನೆ.

ಈಗ ಎಲ್ಲವೂ ಕೃತಕವಾಗಿಬಿಟ್ಟಿವೆ. ಸುಖ ಸಂತೋಷಗಳು ಸಹ ಷಾಪಿಂಗ್ ಮಾಲ್‌ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ಪಿಝ್ಝಾ ಕಾರ್ನರುಗಳಲ್ಲಿ ದೊರೆಯುವ ಕೃತಕ ವಸ್ತುಗಳಾಗಿವೆ. ಸಂತೋಷವನ್ನು ಅಳೆಯುವ ಮಾನದಂಡ ಬದಲಾಗಿದೆ. ಯಾರು ಬದುಕಲು ದುಡಿಯುತ್ತಿಲ್ಲ. ಎಲ್ಲರೂ ಹಣ್ಣಕ್ಕಾಗಿ ದುಡಿಯುತ್ತಿರುವಂತೆ ಕಾಣುತ್ತಿದ್ದಾರೆ. ಹಣವೇ ಸರ್ವಸ್ವ ಆಗಿಬಿಟ್ಟಿದೆ. ‘ಕುರುಡು ಕಾಂಚಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು’ ಎಂಬುದು ಹಳೆಯ ಮಾತಾಯಿತು. ಈಗ ಅದು ತನ್ನಿಂದ ದೂರ ಇದ್ದವರನ್ನು ಬಳಿಸೆಳೆದುಕೊಂಡು ತುಳಿದು ಹಾಕುತ್ತಿದೆ. ಹಣ ಈಗ ಮಾರಣಾಂತಿಕ ಮೋಹಕತೆ ಗಳಿಸಿಕೊಂಡಿದೆ. ಜನ ದುಡಿದು ದುಡಿದು ಸಾಯುತ್ತಿದ್ದಾರೆ; ಬದುಕಲು!

ಸಂಬಂಧಗಳು, ಭಾವನೆಗಳು ಈಗ ವ್ಯವಹಾರಿಕಗಳಾಗಿವೆ. ಮೌಲ್ಯಗಳು ಶೂನ್ಯದಲ್ಲಿ ಐಕ್ಯವಾಗಿವೆ. ಹಿಂದೆ ಬದುಕಿನ ಬುನಾದಿಗಳಾಗಿದ್ದ ವಿಷಯಗಳಿಗೆ ಈಗ ನಮ್ಮಲ್ಲಿ ಸಮಯವಿಲ್ಲ. ಒಂದಿಷ್ಟು ವರ್ಷಗಳ ಹಿಂದೆ ಪ್ರತಿಯೊಬ್ಬನಿಗೂ ಸಿಗುತಿದದ್ದು ಇಪ್ಪತ್ತನಾಲ್ಕು ಗಂಟೆಗಳು ಮಾತ್ರ. ಈಗಲೂ ಅಷ್ಟೇ. ಆದರೆ ಇಂದು ನಮ್ಮ ಆದ್ಯತೆಗಳು ತಲೆಕೆಳಕಾಗಿವೆ. ಹಾಗಾಗಿ ಜೀವನವಶ್ಯಕ ಸಂಗತಿಗಳಿಗೆ ಸಮಯವಿಲ್ಲ. ನಾವು ಬೇರೆಯವರಿಗಾಗಿ ಬದುಕುವುದರಲ್ಲಿ ಬ್ಯುಸಿಯಾಗಿರುವುದರಿಂದ ನಮಗಾಗಿ ಬದುಕಲು ಪುರುಸೊತ್ತಿಲ್ಲ. ದಾಂಪತ್ಯವೆನ್ನುವುದು ವೀಕ್ ಎಂಡ್ ಸಂಗತಿಯಾಗಿದೆ. ಗೆಳೆತನವೆಂಬುದು ಫ್ರೆಂಡ್‌ಶಿಪ್ ಡೇ ದಿನದ ವಾರ್ಷಿಕ ಸಂತೆಯಲ್ಲಿ ಸಿಗುವ ಸರಕಾಗಿದೆ.

ಸಪ್ತಸಾಗರದಾಚೆಯ ದೇಶದಲ್ಲಿ ಶಾಪಿಂಗ್ ಮಾಡುವುದು ಪಕ್ಕದೂರಿನ ವಾರದ ಸಂತೆಯಲ್ಲಿ ಖರೀದಿ ಮಾಡುವಷ್ಟೆ ಸಲೀಸಾಗಿದೆ. ಎಲ್ಲಾ ಭಾವನಾತ್ಮಕ ಸಂಬಂಧಗಳಿಂದ ಮಾನಸಿಕವಾಗಿ ಕಳಚಿಕೊಳ್ಳುವುದೂ ಅಷ್ಟೇ ಸುಲಭವಾಗಿದೆ. ಯಾರು ಯಾರನ್ನೂ ದೂರುತ್ತಿಲ್ಲ, ಎಲ್ಲರೂ ಅವರವರ ಪಾಡಿಗೆ ಒಂದಿಲ್ಲ ಒಂದು ನೆಪದಲ್ಲಿ ದೂರವಾಗುತ್ತಿದ್ದಾರೆ. ದೂರವಾಗುವುದು ಅನಿವಾರ್ಯತೆ ಎಂದು ಒಪ್ಪಿಕೊಂಡಿಯಾಗಿದೆ.

ಮನೆಯೆಂಬುದು ಕ್ರಮೇಣ ನಾಲ್ಕು ಗೋಡೆಗಳ ಕಟ್ಟಡವಾಗುತ್ತಿದೆ. ಅಲ್ಲಿ ಈಗ ಮನಸ್ಸುಗಳ ಕಲರವ ಕ್ಷೀಣವಾಗುತ್ತಿದೆ. ದೇಹಗಳ ಕೊಸರಾಟವಷ್ಟೇ ಕೇಳಿಸುತ್ತಿದೆ. ಮನೆಯೊಳಗಿನ ವಿಷಯಗಳು ಅವುಗಳಿಗೆ ಸಂಬಂಧಿಸಿದವರಿಂದಲೇ ಮೊಬೈಲ್‌ಗಳ ಮೂಲಕ ಬೀದಿಯಲ್ಲಿ ಚರ್ಚಿಸಲ್ಪಡುತ್ತಿವೆ. ಹಣದಾಸೆಗೆ ಅಂತರಂಗದ ಪಿಸುಮಾತುಗಳು, ಯಾವುದೋ ಕ್ಷಣದ ಕ್ಷಣಿಕ ಆನಿಸಿಕೆ, ಉದ್ದೇಶಗಳು ರಿಯಾಲಿಟಿ ಶೋಗಳ ಮೂಲಕ ಸಾರ್ವಜನಿಕವಾಗಿ ಬೆತ್ತಲಾಗುತ್ತಿವೆ. ಸತ್ಯಕ್ಕೆಲ್ಲಿದೆ ಬೆಲೆ ಎಂದು ಗೊಣಗುತ್ತಿದ್ದವರೂ ಈಗ ಹೌಹಾರಿದ್ದಾರೆ; ‘ಸತ್ಯ’ಕ್ಕೆ ಸಿಗುತ್ತಿರುವ ಕೋಟಿ ‘ಬೆಲೆ’ ಕಂಡು! ಅಸಹ್ಯವನ್ನೂ ಪಟ್ಟುಕೊಳ್ಳುತ್ತಿದ್ದಾರೆ.

ನದಿಯ ನೀರು ಬಾಟಲಿಯೊಳಗೆ ಬಂಧಿಯಾಗಿ ಮಾರಟದ ವಸ್ತು ಆಗಿದೆ. ಅಷ್ಟೇ ಅಲ್ಲ, ಕಣ್ಣೀರ ಹನಿಯೂ ಸಹ ಮಾರಟದ ಸರಕಾಗಿದೆ. ಇದುವರೆಗೂ ದೇಹವಷ್ಟೇ ಮಾರಾಟದ ವಸ್ತು ಆಗಿತ್ತು, ಈಗ ಅದರೊಳಗಿನ ಆತ್ಮವೂ ಸಹ ಮಾರಟವಾಗುತ್ತಿದೆ; ಮೊದಲನೆಯದು ಹಲವು ಅನಿವಾರ್ಯ ಕಾರಣಗಳಿಂದಾಗಿ, ಕೊನೆಯದು ಹಣದ ಹುಚ್ಚು ಮೋಹಕ್ಕಾಗಿ.

ಇದಕ್ಕೆಲ್ಲಾ ಜಾಗತೀಕರಣ ಕಾರಣವೊ ಅಥವ ಅದು ಕೇವಲ ಒಂದು ನೆಪವೋ? ಉತ್ತರ; ಅವರವರ ಭಾವಕ್ಕೆ, ಅವರವರ ಬಕುತಿಗೆ......... ಈ ಸಂತೆಯೊಳಗೆ ಏಕಾಂತ ಸುಖದ ಅನುಭವ ಸಾಧ್ಯವೇ?

Thursday, May 20, 2010

ಬದುಕು ಎಂಬ ವಿರೋಧಾಭಾಸಗಳ ಸಂತೆ


ಇಂದು ಬೆಳಿಗಿನ ಜಾವ ಬಾಗಿಲು ತೆರೆದು ನೋಡಿದಾಗ ಹೊರಗಡೆ ಕೋಮಲ ವಾತಾವರಣ ಮೂಡಿತ್ತು. ಮನಸ್ಸು ಒಮ್ಮೆಗೇ ಅರಳಿಕೊಂಡಿತು. ನಿನ್ನೆ ರಾತ್ರಿ ಬಿದ್ದ ಮಳೆಯಿಂದ ಭೂಮಿ ತಂಪಾಗಿತ್ತು. ಮೋಡ ಕವಿದು ಮಂಜು ಮುಸುಕಿದಂತಹ ದೃಶ್ಯ, ಹಿತವಾದ ತಂಗಾಳಿಯಿಂದಾಗಿ ಮೋಹಕ ವಾತಾವರಣ ಸೃಷ್ಟಿಯಾಗಿತ್ತು. ಒಟ್ಟಾರೆ ಇಂದು ನಮ್ಮ ಹಾಸನ ತನ್ನ ಇನ್ನೊಂದು ಹೆಸರಿಗೆ ತಕ್ಕಂತೆ 'ಬಡವರ ಊಟಿ’ ಆಗಿತ್ತು.

ನನಗಾಗುತ್ತಿದ ಖುಷಿಯನ್ನು ಇತರ ಊರುಗಳಲ್ಲಿರುವ ನನ್ನ ಸ್ನೇಹಿತರೊಂದಿಗೆ SMS ಮೂಲಕ ಹಂಚಿಕೊಂಡೆ. ವಾತಾವರಣದ ವರ್ಣನೆ, ಮನಸ್ಸಿನ ಪ್ರಫುಲ್ಲತೆ...ಇದೆಲ್ಲಾ SMSಗಳಲ್ಲಿ ಹರಿದಾಡುತ್ತಿದ್ದಾಗಲೆ ಇಂದಿನ ದಿನಪತ್ರಿಕೆ ನನ್ನ ಕೈ ಸೇರಿ ಅದರ ಮುಖಪುಟ ಸುದ್ದಿ ಕಣ್ಣಿಗೆ ಬಿತ್ತು. 'ಕಾಳಿಯಾದ ಮಳೆಗಾಳಿ, ರಾಜ್ಯಾದ್ಯಂತ 4 ಜನರ ಬಲಿ... ಲಕ್ಷಾಂತರ ರೂ ಸ್ವತ್ತು ಹಾನಿ’. ಒಮ್ಮೆಗೇ ಮನಸ್ಸಿನ ಪ್ರಶಾಂತ ಕೊಳದಲ್ಲಿ ಒಂದು ಸಣ್ಣ ಕಲ್ಲು ಬಿದ್ದಂತಾಯಿತು. ಮಳೆ ಇಲ್ಲಿ ಮೋಹಕ ವಾತಾವರಣ ಸೃಷ್ಟಿಸಿದ್ದರೆ ಅದೇ ಮಳೆ ಬೇರೆ ಕಡೆ ರೌದ್ರವತಾರ ತಾಳಿದೆ. ನಾನು ಇಲ್ಲಿ ಮಳೆ ನೀಡಿರುವ ತಂಪು ತಂಗಾಳಿಯನ್ನು ಅನುಭವಿಸುತ್ತಿದ್ದರೆ, ಅದೇ ಮಳೆಯಿಂದಾಗಿ ಬೇರೆ ಕಡೆ ಜನರ ಬದುಕು ದುರ್ಭರವಾಗಿದೆ. ಇಂತಹ ವಿರೋಧಾಭಾಸದ ಸಂದರ್ಭದಲ್ಲಿ ನಾನು ಸುಖಿಸುವುದು ಸರಿಯಾ? ಅಥವ ಜೀವನನೇ ಹೀಗಾ? ಈ ಪ್ರಶ್ನೆಯನ್ನು ಗೆಳೆಯರ ಮುಂದಿಟ್ಟೆ. 'ಜೀವನವೇ ಹೀಗೆ... ಒಬ್ಬರ ಇಷ್ಟ, ಇನ್ನೊಬ್ಬರ ಕಷ್ಟ....enjoy!' ಎಂದರು ನನ್ನ ಗೆಳೆಯ ಉದಯ್.

ಕಳೆದ ವರ್ಷವೂ ಸರಿಸುಮಾರು ಇಂತಹದೇ ಸ್ಥಿತಿ ಉಂಟಾಗಿತ್ತು. ನಾನು ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಹಬ್ಬದ ವಾತಾವರಣ. ಅದೇ ವೇಳೆಯಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆಯ ಅರ್ಭಟದಿಂದ ಸಾವಿರಾರು ಮಂದಿ ಸಂತ್ರಸ್ತರಾದರು. ಸಹಜವಾಗಿ ಪತ್ರಿಕೆಗಳ ಮುಖಪುಟಗಳಲ್ಲಿ ನೆರೆ ಹಾವಾಳಿಯೇ ಆವರಿಸಿಕೊಂಡಿತ್ತು. ಆ ಹಬ್ಬದ ವಾತಾವರಣದಲ್ಲಿ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಅರೆ ಕ್ಷಣ ಪಾಪಪ್ರಙ್ಞೆ ಕಾಡುತಿತ್ತು. ಪಲಾಯನವಾದಿಯಂತೆ ಅಲ್ಲಿದ್ದಷ್ಟು ದಿನ ಪತ್ರಿಕೆಗಳ ಬಳಿ ಸುಳಿಯಲಿಲ್ಲ! ಆಗ ಪತ್ರಿಕೆಯೊಂದರ ಒಳಪುಟದಲ್ಲಿ ಒಂದು ಚಿತ್ರ ಪ್ರಕಟವಾಗಿತ್ತು. ನೆರೆಗೆ ಸಂಬಂಧಿಸಿದ್ದೇ, ಆದರೆ ಪರೋಕ್ಷವಾಗಿ. ಇಲ್ಲಿಯ ಮಹಾಮಾರಿ ಮಳೆಯಿಂದಾಗಿ ಆಂಧ್ರಪ್ರದೇಶದ ಒಂದು ಜಲಾಶಯ ತುಂಬಿತ್ತು. ಒಳಹರಿವು ಹೆಚ್ಚಿದ್ದರಿಂದ ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿ ಬಂದಿತ್ತು. ಎಷ್ಟೋ ವರ್ಷಗಳ ನಂತರ ಆ ಸಂದರ್ಭ ಬಂದಿತ್ತು. ಹಾಗಾಗಿ ಅದನ್ನು ವೀಕ್ಷಿಸಲು ಅಲ್ಲಿಯ ಒಂದು ಸೇತುವೆ ಮೇಲೆ ಜನಸಾಗರವೇ ನೆರೆದಿತ್ತು. ಇರುವೆಗೂ ಸಹ ಜಾಗವಿರಲಿಲ್ಲ! ಆ ಜನ ಸಾಗರದ ಫೋಟೊ ಅದಾಗಿತ್ತು.

ಮುಖಪುಟದಲ್ಲಿ ಮಳೆಯಿಂದ ಕೊಚ್ಚಿಹೋದ ಬದುಕುಗಳ ಚಿತ್ರಗಳು, ಒಳಪುಟದಲ್ಲಿ ಅದೇ ಮಳೆಯ ಕಾರಣಾದಿಂದ ಉಂಟಾದ ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಿರುವ ಜನಸಾಗರದ ಚಿತ್ರ! ಮಾನವ ಬದುಕು ಎಂತಹ ವಿರೋಧಭಾಸಗಳ ಕಂತೆಯಲ್ಲವೇ?!

******************************

ನಾನು ಕೆಲಸಕ್ಕೆ ಸೇರುವ ಮುಂಚೆ ನಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರಿದ್ದರು. ಕಛೇರಿಗೆ ಪ್ರತಿದಿನ ಒಂದು ಗಂಟೆ ಮುಂಚಿತವಾಗಿ ಬಂದು ಪತ್ರಿಕೆ ಓದುತ್ತಿದ್ದರು. ಒಮ್ಮೆ ನನ್ನ ಸಹಪಾಟಿಯೊಬ್ಬರು ಬಂದು ನೋಡಿದಾಗ ಆ ಹಿರಿಯ ಅಧಿಕಾರಿ ತಲೆ ಮೇಲೆ ಕೈ ಹೊತ್ತು ಚಿಂತಾಕ್ರಾಂತರಾಗಿ ಕುಳಿತ್ತಿದ್ದರಂತೆ. ಸಹಪಾಟಿಗೆ ಗಾಬರಿಯಾಗಿ ಏನಾಯಿತು ಎಂದು ವಿಚಾರಿಸಿದಾಗ, ಆಗ ಸೂರತ್ ನಲ್ಲಿ ಪ್ಲೇಗ್ ನಿಂದಾಗಿ ಒಂದಿಷ್ಟು ಮಂದಿ ಸತ್ತಿದ್ದ ಸುದ್ದಿ ಅವರ ಚಿಂತೆಗೆ ಕಾರಣಾವಾಗಿತ್ತು! ಎಲ್ಲಿಯೇ ಅವಘಡವಾಗಲಿ ಅಂದು ಅವರು ಬೇಸರದಲ್ಲಿ ಇರುತ್ತಿದ್ದರಂತೆ. ಅಲ್ಲಿ ನಾಟಕೀಯತೆ ಆಗಲಿ ತೋರಿಕೆ ಆಗಲಿ ಇರುತ್ತಿರಲಿಲ್ಲ!

****************************

ಈ ಜೀವನ, ಈ ಬದುಕು ಯಾರ ಅಗಲಿಕೆಯಿಂದಾಗಲಿ ಅಥವ ಬರುವಿಕೆಯಿಂದಾಗಲಿ ತನ್ನ ಲಯವನ್ನು ಕಳೆದುಕೊಳ್ಳುವುದಿಲ್ಲ. ಅದು ಸಾಗುತ್ತಲೇ ಇರುತ್ತದೆ. ಸಾಗುತ್ತಲೇ ಇರಬೇಕು. ಎಲ್ಲೋ ಓದಿದ ನೆನಪು. ಒಬ್ಬ ಪಾಶ್ಚಾತ್ಯ ತತ್ವಙ್ಞಾನಿ ತನ್ನ ಕೊನೇ ಗಳಿಗೆಯಲ್ಲಿ ಹೇಳಿದ್ದು " ನನ್ನ ಇಷ್ಟು ವರ್ಷದ ಜಿವಾನುಭವದಿಂದು ಇದುವರೆಗು ನಾನು ಕಲೆತದ್ದು ಮೂರು ಪದದ ಒಂದೇ ಒಂದು ವಾಕ್ಯ 'LIFE GOES ON' "

ಚಿತ್ರ: ಎ ಜೆ ಜೆ