ಬೇ ಜಾನ್ ದಿಲ್ ಕೊ ತೇರೆ ಇಷ್ಖ್‍ನೇ ಝಿಂದಾ ಕಿಯಾ
ಫಿರ್ ತೇರೆ ಇಷ್ಖ್ ನೇ ಹೀ ಇಸ್ ದಿಲ್ ಕೋ ತಬ್‍ಹಾ ಕಿಯಾ
ತಡಪ್ ತಡಪ್ ಕೆ ಇಸ್ ದಿಲ್ ಸೇ ಆಹ್ ನಿಕಲ್ ತೀ ರಹಿ
ಮುಜ್‍ಕೋ ಸಝಾ ದಿ ಪ್ಯಾರ್ ಕಿ ಐಸಾ ಕ್ಯಾ ಗುನ್ಹಾ ಕಿಯಾ?
(ಕೊರಡು ಹೃದಯಕ್ಕೆ ಜೀವ ತುಂಬಿದ್ದೇ ನಿನ್ನ ಪ್ರೀತಿ
ಅದನ್ನು ನಿರ್ನಾಮ ಮಾಡಿದ್ದೂ ಅದೇ ಪ್ರೀತಿ
ಹೃದಯದ ಪ್ರತಿ ಮಿಡಿತವೂ ರೋದನೆಯಾಗಿ ಹೊರ ಹೊಮ್ಮುವಂತೆ,
ನನಗೆ ಪ್ರೀತಿಯನ್ನು ಶಿಕ್ಷೆಯಾಗಿ ಕೊಟ್ಟೆ, ನಾನು ಅಂತಹ ಮಹಾಪಾಪ ಮಾಡಿದ್ದಾದರೂ ಏನು?)
’ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದ ಈ ಹಾಡು ನನ್ನನೇಕೆ ಅಷ್ಟು ಸೆಳೆಯುತ್ತದೆಯೋ ಗೊತ್ತಿಲ್ಲ. ಅದೇನು ಮಧುರ ಯುಗಳ ಗೀತೆಯಲ್ಲ; ಪಕ್ಕಾ ವಿರಹ ಗೀತೆ! ಆ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗು ಐಶ್ವ್ರರ್ಯ ನಟಿಸುತ್ತಿದ್ದ ಪಾತ್ರಗಳಿಗೆ ಸಂಬಂಧಿಸಿದ್ದು.
ಪ್ರತಿಯೊಂದು ಪದವನ್ನು ವಿರಹ ವೇದನೆಯಲ್ಲಿ ಅದ್ದಿ ತೆಗೆದಂತಿರುವ ಈ ಹಾಡಿನ ಸಾಹಿತ್ಯ ಅಥವಾ ಗಾಯಕನ ಹಾಡುಗಾರಿಕೆಯಲ್ಲಿರುವ ಆ ಭಾವ ತೀವ್ರತೆ, ಅಥವಾ ಆ ಹಾಡಿನ ಭಾವಕ್ಕೆ ತಕ್ಕಂತೆ ಇಡೀ ಸಂಗೀತದಲ್ಲಿ ಅಲ್ಲಲ್ಲಿ pause ನಂತಹ ಮೌನರಾಗಗಳನ್ನು ಸಂಯೋಜಿಸಿರುವುದು ಅಥವಾ ಒಟ್ಟಾರೆ ಇವೆಲ್ಲಾ ಸೇರಿ ಆ ಹಾಡು ನನ್ನನ್ನು ಆಕರ್ಷಿಸುತ್ತಾ, ಗೊತ್ತಿಲ್ಲ.
ಸುಮಾರು ಹನ್ನೆರಡು ವರ್ಷಗಳ ಹಿಂದಿನ ಮಾತು. ಆಗ ನಾನಿದ್ದದ್ದು ಒಂದು ಹಳ್ಳಿಯಲ್ಲಿ. ಅಲ್ಲಿ ಅಕ್ಕಪಕ್ಕ ಒತ್ತೊತ್ತಿಗೆ ಮನೆಗಳು ಇದ್ದದ್ದು ಕಡಿಮೆ. ನಾನಿದ್ದ ಮನೆಯ ಅಕ್ಕಪಕ್ಕ ಯಾವುದೇ ಮನೆಗಳಿರಲಿಲ್ಲ. ಅಂತಹ ಸರ್ವಸ್ವತಂತ್ರ ಎನ್ನಬಹುದಾದ ಮನೆಯಲ್ಲಿ ಪ್ರತಿದಿನ ರಾತ್ರಿಯ ನೀರವತೆಯಲ್ಲಿ ಆ ಕಾಲದ ನನ್ನ ಏಕಾಂತದ ಸಂಗಾತಿಯಾಗಿದ್ದ ಬಿಪಿಎಲ್ ಟೇಪ್ ರೆಕಾರ್ಡನಲ್ಲಿ ಕೇಕೆ ಎಂಬ ಗಾಯಕ ಈ ಹಾಡನ್ನು ಹಾಡುತ್ತಿದ್ದ. ಅವನು ಎಲ್ಲೋ ನಿರ್ಜನವಾಗಿರುವ ಪ್ರಕೃತಿಯ ಮಡಿಲಲ್ಲಿ ತನ್ನ ವಿರಹ ಗೀತೆಯನ್ನು ತನಗಾಗಿ ಮಾತ್ರ ಹಾಡಿಕೊಳ್ಳುತ್ತಿದ್ದಾನೆ ಅನಿಸುತ್ತಿತ್ತು. ರಾತ್ರಿಯ ಆ ನೀರವತೆ ಹಾಗು ಗಾಯಕನ ಆ ಭಾವ ತೀವ್ರತೆ ಒಂದಂಕ್ಕೊಂದು perfect match ಆಗಿರುತ್ತಿತ್ತು. ನನ್ನ ಆತ್ಮದ ಗೆಳೆಯ ತನ್ನ ವಿರಹ ವೇದನೆಯನ್ನು ತನ್ನ ಪಾಡಿಗೆ ತಾನು ನನ್ನ ಮುಂದೆ ಹೇಳಿಕೊಂಡು ಹಗುರಾಗುತ್ತಿದ್ದಾನೇನೋ ಎಂಬಂತೆ ನಾನು ಆ ಹಾಡನ್ನು ಕೇಳುತ್ತಿದ್ದೆ. ಬೇರೆ ಹಾಡುಗಳನ್ನು ಕೇಳುವ ಎಂದಿನ ಸಾಮಾನ್ಯ volumeಗಿಂತ ಹೆಚ್ಚಿನ ವಾಲ್ಯುಮ್‍ನಲ್ಲೇ ಆ ಹಾಡನ್ನು ಕೇಳುತ್ತಿದ್ದೆ. ಹಾಗೆ loud ಆಗಿ ಕೇಳಿದಾಗ ಮಾತ್ರ ನನಗೆ ಸಮಾಧಾನ!
ಹಾಡಿನಲ್ಲಿ ಆ ಭಗ್ನಪ್ರೇಮಿಗೆ ಯಾರ ವಿರುದ್ದವೂ ತಕರಾರಿಲ್ಲ. ’ಅಗರ್ ಮಿಲೂಂ ಖುದಾ ಸೇ ತೊ ಪೂಚೂಂಗ ಏ ಖುದಾಯಾ, ಜಿಸ್ಮ್ ತು ಮಿಟ್ಟಿ ಕಾ ದೇಕರ್ ಶೀಷೇಸ ದಿಲ್ ಕ್ಯೂಂ ಬನಾಯ.....’ (ಅಕಸ್ಮಾತ್ ದೇವರೊಂದಿಗೆ ಭೇಟಿ ಸಾದ್ಯವಾದರೆ ಅವನಲ್ಲಿ ವಿಚಾರಿಸುತ್ತೇನೆ; ಮಣ್ಣಿನ ದೇಹ ಕೊಟ್ಟು ಹೃದಯವನ್ನೇಕೆ ಗಾಜಿನದು ಕೊಟ್ಟೆ?) ಎಂದು ಕೇಳುತ್ತಾನೆ.
ಆ ಹಾಡು, ಆ ಚಿತ್ರದಲ್ಲಿ ಐಶ್ ಹಾಗೂ ಸಲ್ಮಾನ್ ಖಾನ್ ಪಾತ್ರಗಳ ಕತೆ, ಇವರಿಬ್ಬರ ವೈಯುಕ್ತಿಕ ಜೀವನದಲ್ಲಿ ಜರುಗಿದ ಸಂಗತಿಗಳು..... ಇವೆಲ್ಲವನ್ನೂ ಗಮನಿಸಿದರೆ ’ಹಮ್ ದಿಲ್ ದೇ ಚುಕೆ ಸನಮ್’ನ ನಿರ್ದೇಶಕ ಸಂಜಯ್ ಲೀಲ ಬನ್ಸಾಲಿಗೆ ಇವರಿಬ್ಬರ ಭವಿಷ್ಯ ಆಗಲೇ ಗೊತ್ತಿತ್ತೆ? ಎಂಬ ಅನುಮಾನ ಹುಟ್ಟುತ್ತೆ!
ಐಶ್ವರ್ಯಳನ್ನು ಆಕೆಯ ಮದುವೆ ನಂತರ ಈಗ ಪರದೆಯ ಮೇಲೆ ಕಂಡರೆ ಆ ಹಾಡು ನನಗೂ ಒಂದಿಷ್ಟು ಸಂಬಂಧಿಸಿದ್ದು ಎಂದನಿಸುತ್ತೆ. ನನಗರಿವಿಲ್ಲದೆ ತಡಪ್ ತಡಪ್ ಕೆ ಇಸ್ ದಿಲ್ ಸೆ .... ಹಾಡು ಹೊರ ಬರುತ್ತದೆ. ನನ್ನ ಮಡದಿ ನನ್ನ ’ವಿರಹ ವೇದನೆ’ ಯನ್ನು ಕಂಡು ಒಳಗೊಳಗೆ ಮುಸಿ ಮುಸಿ ನಗುತ್ತಾಳೆ.
(ನವೆಂಬರ್ 20 ರ ’ಹಾಯ್ ಬೆಂಗಳೂರ್!’ ಪತ್ರಿಕೆಯ ’ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣದಲ್ಲಿ ಪ್ರಕಟಿತ ನನ್ನ ಬರಹ)