ಈ ಜಾಗತೀಕರಣ, ಉದಾರೀಕರಣ ಇವೆಲ್ಲಾ ಯಾರ ಮಿದುಳಿನ ಕೂಸುಗಳೋ? ಮಹಾಮಾರಿಯಂತೆ ಅಪ್ಪಳಿಸಿ ಬಿಟ್ಟಿವೆ. ಬದುಕುಗಳು ಅಲ್ಲೋಲ ಕಲ್ಲೋಲವಾಗಿಬಿಟ್ಟಿವೆ. ಪಟ್ಟಣಗಳು ಹಳ್ಳೀಗಳ್ಳನ್ನು ಕಬಳಿಸುತ್ತಿರುವ ಈ ಕಾಲದಲ್ಲಿ ಪ್ರಪಂಚವೇ ಒಂದು ಗ್ರಾಮವಂತೆ! ಮನುಷ್ಯ ಮನುಷ್ಯನಾಗಿ ಉಳಿದಿಲ್ಲ, ಮಷೀನುಗಳ ಹಿಡಿತಕ್ಕೆ ಸಿಲುಕಿ ತನಗರಿವಿಲ್ಲದಂತೆ ನಲುಗಿ ಹೋಗಿದ್ದಾನೆ.
ಈಗ ಎಲ್ಲವೂ ಕೃತಕವಾಗಿಬಿಟ್ಟಿವೆ. ಸುಖ ಸಂತೋಷಗಳು ಸಹ ಷಾಪಿಂಗ್ ಮಾಲ್‌ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ಪಿಝ್ಝಾ ಕಾರ್ನರುಗಳಲ್ಲಿ ದೊರೆಯುವ ಕೃತಕ ವಸ್ತುಗಳಾಗಿವೆ. ಸಂತೋಷವನ್ನು ಅಳೆಯುವ ಮಾನದಂಡ ಬದಲಾಗಿದೆ. ಯಾರು ಬದುಕಲು ದುಡಿಯುತ್ತಿಲ್ಲ. ಎಲ್ಲರೂ ಹಣ್ಣಕ್ಕಾಗಿ ದುಡಿಯುತ್ತಿರುವಂತೆ ಕಾಣುತ್ತಿದ್ದಾರೆ. ಹಣವೇ ಸರ್ವಸ್ವ ಆಗಿಬಿಟ್ಟಿದೆ. ‘ಕುರುಡು ಕಾಂಚಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು’ ಎಂಬುದು ಹಳೆಯ ಮಾತಾಯಿತು. ಈಗ ಅದು ತನ್ನಿಂದ ದೂರ ಇದ್ದವರನ್ನು ಬಳಿಸೆಳೆದುಕೊಂಡು ತುಳಿದು ಹಾಕುತ್ತಿದೆ. ಹಣ ಈಗ ಮಾರಣಾಂತಿಕ ಮೋಹಕತೆ ಗಳಿಸಿಕೊಂಡಿದೆ. ಜನ ದುಡಿದು ದುಡಿದು ಸಾಯುತ್ತಿದ್ದಾರೆ; ಬದುಕಲು!
ಸಂಬಂಧಗಳು, ಭಾವನೆಗಳು ಈಗ ವ್ಯವಹಾರಿಕಗಳಾಗಿವೆ. ಮೌಲ್ಯಗಳು ಶೂನ್ಯದಲ್ಲಿ ಐಕ್ಯವಾಗಿವೆ. ಹಿಂದೆ ಬದುಕಿನ ಬುನಾದಿಗಳಾಗಿದ್ದ ವಿಷಯಗಳಿಗೆ ಈಗ ನಮ್ಮಲ್ಲಿ ಸಮಯವಿಲ್ಲ. ಒಂದಿಷ್ಟು ವರ್ಷಗಳ ಹಿಂದೆ ಪ್ರತಿಯೊಬ್ಬನಿಗೂ ಸಿಗುತಿದದ್ದು ಇಪ್ಪತ್ತನಾಲ್ಕು ಗಂಟೆಗಳು ಮಾತ್ರ. ಈಗಲೂ ಅಷ್ಟೇ. ಆದರೆ ಇಂದು ನಮ್ಮ ಆದ್ಯತೆಗಳು ತಲೆಕೆಳಕಾಗಿವೆ. ಹಾಗಾಗಿ ಜೀವನವಶ್ಯಕ ಸಂಗತಿಗಳಿಗೆ ಸಮಯವಿಲ್ಲ. ನಾವು ಬೇರೆಯವರಿಗಾಗಿ ಬದುಕುವುದರಲ್ಲಿ ಬ್ಯುಸಿಯಾಗಿರುವುದರಿಂದ ನಮಗಾಗಿ ಬದುಕಲು ಪುರುಸೊತ್ತಿಲ್ಲ. ದಾಂಪತ್ಯವೆನ್ನುವುದು ವೀಕ್ ಎಂಡ್ ಸಂಗತಿಯಾಗಿದೆ. ಗೆಳೆತನವೆಂಬುದು ಫ್ರೆಂಡ್‌ಶಿಪ್ ಡೇ ದಿನದ ವಾರ್ಷಿಕ ಸಂತೆಯಲ್ಲಿ ಸಿಗುವ ಸರಕಾಗಿದೆ.
ಸಪ್ತಸಾಗರದಾಚೆಯ ದೇಶದಲ್ಲಿ ಶಾಪಿಂಗ್ ಮಾಡುವುದು ಪಕ್ಕದೂರಿನ ವಾರದ ಸಂತೆಯಲ್ಲಿ ಖರೀದಿ ಮಾಡುವಷ್ಟೆ ಸಲೀಸಾಗಿದೆ. ಎಲ್ಲಾ ಭಾವನಾತ್ಮಕ ಸಂಬಂಧಗಳಿಂದ ಮಾನಸಿಕವಾಗಿ ಕಳಚಿಕೊಳ್ಳುವುದೂ ಅಷ್ಟೇ ಸುಲಭವಾಗಿದೆ. ಯಾರು ಯಾರನ್ನೂ ದೂರುತ್ತಿಲ್ಲ, ಎಲ್ಲರೂ ಅವರವರ ಪಾಡಿಗೆ ಒಂದಿಲ್ಲ ಒಂದು ನೆಪದಲ್ಲಿ ದೂರವಾಗುತ್ತಿದ್ದಾರೆ. ದೂರವಾಗುವುದು ಅನಿವಾರ್ಯತೆ ಎಂದು ಒಪ್ಪಿಕೊಂಡಿಯಾಗಿದೆ.
ಮನೆಯೆಂಬುದು ಕ್ರಮೇಣ ನಾಲ್ಕು ಗೋಡೆಗಳ ಕಟ್ಟಡವಾಗುತ್ತಿದೆ. ಅಲ್ಲಿ ಈಗ ಮನಸ್ಸುಗಳ ಕಲರವ ಕ್ಷೀಣವಾಗುತ್ತಿದೆ. ದೇಹಗಳ ಕೊಸರಾಟವಷ್ಟೇ ಕೇಳಿಸುತ್ತಿದೆ. ಮನೆಯೊಳಗಿನ ವಿಷಯಗಳು ಅವುಗಳಿಗೆ ಸಂಬಂಧಿಸಿದವರಿಂದಲೇ ಮೊಬೈಲ್‌ಗಳ ಮೂಲಕ ಬೀದಿಯಲ್ಲಿ ಚರ್ಚಿಸಲ್ಪಡುತ್ತಿವೆ. ಹಣದಾಸೆಗೆ ಅಂತರಂಗದ ಪಿಸುಮಾತುಗಳು, ಯಾವುದೋ ಕ್ಷಣದ ಕ್ಷಣಿಕ ಆನಿಸಿಕೆ, ಉದ್ದೇಶಗಳು ರಿಯಾಲಿಟಿ ಶೋಗಳ ಮೂಲಕ ಸಾರ್ವಜನಿಕವಾಗಿ ಬೆತ್ತಲಾಗುತ್ತಿವೆ. ಸತ್ಯಕ್ಕೆಲ್ಲಿದೆ ಬೆಲೆ ಎಂದು ಗೊಣಗುತ್ತಿದ್ದವರೂ ಈಗ ಹೌಹಾರಿದ್ದಾರೆ; ‘ಸತ್ಯ’ಕ್ಕೆ ಸಿಗುತ್ತಿರುವ ಕೋಟಿ ‘ಬೆಲೆ’ ಕಂಡು! ಅಸಹ್ಯವನ್ನೂ ಪಟ್ಟುಕೊಳ್ಳುತ್ತಿದ್ದಾರೆ.
ನದಿಯ ನೀರು ಬಾಟಲಿಯೊಳಗೆ ಬಂಧಿಯಾಗಿ ಮಾರಟದ ವಸ್ತು ಆಗಿದೆ. ಅಷ್ಟೇ ಅಲ್ಲ, ಕಣ್ಣೀರ ಹನಿಯೂ ಸಹ ಮಾರಟದ ಸರಕಾಗಿದೆ. ಇದುವರೆಗೂ ದೇಹವಷ್ಟೇ ಮಾರಾಟದ ವಸ್ತು ಆಗಿತ್ತು, ಈಗ ಅದರೊಳಗಿನ ಆತ್ಮವೂ ಸಹ ಮಾರಟವಾಗುತ್ತಿದೆ; ಮೊದಲನೆಯದು ಹಲವು ಅನಿವಾರ್ಯ ಕಾರಣಗಳಿಂದಾಗಿ, ಕೊನೆಯದು ಹಣದ ಹುಚ್ಚು ಮೋಹಕ್ಕಾಗಿ.
ಇದಕ್ಕೆಲ್ಲಾ ಜಾಗತೀಕರಣ ಕಾರಣವೊ ಅಥವ ಅದು ಕೇವಲ ಒಂದು ನೆಪವೋ? ಉತ್ತರ; ಅವರವರ ಭಾವಕ್ಕೆ, ಅವರವರ ಬಕುತಿಗೆ......... ಈ ಸಂತೆಯೊಳಗೆ ಏಕಾಂತ ಸುಖದ ಅನುಭವ ಸಾಧ್ಯವೇ?
The verse she wrote...
3 weeks ago
ತುಂಬಾ ಚನ್ನಾಗಿದೆ ನಿಮ್ಮ ಬರಹ....ನನಗೂ ಕೆಲವೊಮ್ಮೆ ಈಗೆ ಅನಿಸುತ್ತದೆ....ಜೀವನದ ಮ್ವೊಲ್ಯಗಳು ಬೀದಿ ಪಲಾಗುತಿವೆ ಅಂತ....
ReplyDeleteಜಾವೇದ್,
ReplyDeleteಜಾಗತೀಕರಣದ ಬಗ್ಗೆ ತುಂಬ ಅರ್ಥವತ್ತಾದ ಲೇಖನ.
ಆದರ್ಶ ,ಸಮಜವಾದ,ಸಂಸ್ಕೃತಿ ಎಂದೆಲ್ಲ ಆಡಂಬರದ ದೊಂಬರಾಟ ಪ್ರದರ್ಶಿಸುವ ಜನರೇಕೆ, ಜೀವನಶಯ್ಲಿಯಲ್ಲಿ ಆದರ್ಶ ಅಳವಡಿಕೆಯ ಮಾತಿಲ್ಲ........ ತೋರಿಕೆಯ ಆದರ್ಶ ಪ್ರದರ್ಶನವೆಕೆ ...............??????????? ಈ ನಿಟ್ಟಿನಲ್ಲಿ ನಿಮ್ಮದು ಉತ್ತಮ ಬರಹ.............
ReplyDeleteಮುಂದುವರೆಸಿ..........