Sunday, January 1, 2012

2011 ರ ಡೈರಿಯ ಖಾಲಿ ಪುಟಗಳಾಚೆಗಿನ ಸಂಭ್ರಮದ ಕ್ಷಣಗಳು



ಮತ್ತೊಂದು ವರ್ಷ ಇತಿಹಾಸಕ್ಕೆ ಸೇರ್ಪಡೆಯಾಗಿದೆ. ಅದರ ಸಂಕೇತವಾಗಿದ್ದ ಕ್ಯಾಲೆಂಡರ್ ರದ್ದಿ ಪೇಪರಿನ ರಾಶಿಯಲ್ಲಿ ಲೀನವಾಗಿದೆ. 2011 ಎಂಬ 21 ನೆ ಶತಮಾನದ ಎರಡನೆ ದಶಕದ ಮೊದಲ ವರ್ಷ ಅತ್ಯಂತ ಸಕ್ರಿಯವಾಗಿದ್ದ ವರ್ಷ. ಒಂದಲ್ಲ ಒಂದು ಘಟನೆ ಅಥವ ಬದಲಾವಣೆಗಳು ಕೊನೆಯ ದಿನದವರೆಗೂ ಘಟಿಸುತ್ತಲೇ ಇದ್ದವು. ವಿದೇಶಗಳಲ್ಲಿ ರಾಜಕೀಯ ವಿಪ್ಲವಗಳು, ಒಸಾಮ, ಗಡಾಫಿ ಅಂತ್ಯ, ಇಲ್ಲಿ ನಮ್ಮಲ್ಲಿ ದೇಶವ್ಯಾಪಿ ಭ್ರಷ್ಟಾಚಾರ ವಿರೋಧಿ ಆಂದೋಲನ, ರಾಜಕಾರಣಿಗಳ ಸಾಲು ಸಾಲು ಸೆರಮನೆ ವಾಸಗಳು.... ಸುದ್ದಿಗಳಿಗೆ ಬರ ಇಲ್ಲದ ವರ್ಷ ಇದು.

ವೈಯುಕ್ತಿಕ ಮಟ್ಟದಲ್ಲಿ ನನ್ನ ಡೈರಿ ತಿರುವಿಹಾಕಿದರೆ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಪುಟಗಳು ಖಾಲಿ ಖಾಲಿ! ಡೈರಿ ಖರೀದಿಸುವಾಗಿನ ಉತ್ಸಾಹ ಅದನ್ನು ಬರೆಯುವಷ್ಟರಲ್ಲಿ ಬತ್ತಿ ಹೋಗಿರುತ್ತದೆ. ಈ ವರ್ಷದ ಡೈರಿ ಖಾಲಿ ಇರಬಹುದು ಆದರೆ 2011 ನನಗೆ ನೀಡಿದ ಸಂತೋಷ, ನೆಮ್ಮದಿ, ಸಂಭ್ರಮ, ಉತ್ಸಾಹದ ಕ್ಷಣಗಳಿಗೇನು ಕೊರತೆಯಿಲ್ಲ.

ಈ ವರ್ಷ ನನ್ನ ಮಗ ಶಾಲೆ ಮೆಟ್ಟಿಲೇರಿದ. ಅದಕ್ಕಿಂತ ಮುಂಚಿನಿಂದಲೇ ಅವನು ರೂಡಿಸಿಕೊಂಡಿದ್ದ ಚಿತ್ರಕಲೆ ಇನ್ನಷ್ಟು ಪಕ್ವವಾಗಿದೆ. ಅವನು ಬಿಡಿಸುವ ಚಿತ್ರಗಳು, ಆರಿಸುವ ಬಣ್ಣಗಳು ಇನ್ನೂ ಹೆಚ್ಚಿನ ಸೋಜಿಗ ಉಂಟು ಮಾಡುತ್ತಿವೆ. ಚಿತ್ರಕಲೆಯ ಕಡೆಗಿನ ಅವನ ಒಲವು ನಮಗಿನ್ನೂ ಸೋಜಿಗದ ಸಂಗಂತಿಯೇ. ಏಕಂದರೆ ನಮ್ಮಲ್ಲಿ ಯಾರೂ ಅವನಿಗೆ ಇದರತ್ತ ಗಮನ ಸೆಳೆಯುವಂತೆ ಮಾಡಲಿಲ್ಲ, ತನ್ನ ಪಾಡಿಗೆ ತಾನು ಗೀಚಲು ಶುರು ಹಚ್ಚಿಕೊಂಡ. ಅವನ ತರಗತಿಯಲ್ಲಿ (LKG) ಅವರ ಮಿಸ್ ಗೆ ಅವನು favorite ಶಿಷ್ಯ. ಮೊನ್ನೆ ಮೊನ್ನೆ ಅವನ ತರಗತಿಯ ಚಿತ್ರಕಲೆ ಸ್ಪರ್ಧೆಯಲ್ಲಿ ಅವರ ಮಿಸ್ match fix ಮಾಡಿದವರಂತೆ ಹಿಂದು ಮುಂದು ನೋಡದೆ ಮೊದಲನೇ ಬಹುಮಾನ ಕೊಟ್ಟಿದ್ದಾರೆ!

ಇನ್ನೊಬ್ಬ ಹಿರಿಯ ಮಗಳು ಒಂದನೇ ತರಗತಿಗೆ ಸೇರ್ಪಡೆಯಾಗಿದ್ದಾಳೆ. ತನ್ನ ಪಾಡಿಗೆ ತಾನು ಓದಿಕೊಳ್ಲುತ್ತಾಳೆ. ವರ್ಷದ ಪ್ರಾರಂಭದಲ್ಲಿ ಕುಣಿಯುವ ಹುಚ್ಚು ಹಚ್ಚಿಕೊಂಡಿದ್ದಳ್ಳು. ಯಾವುದಾದರು ಹಾಡು ಕೇಳಿಸಿದರೆ ಸಾಕು ಕುಣಿಯಲು ಶುರು ಮಾಡುತ್ತಿದ್ದಳು. ಆದರೆ ವರ್ಷದ ಕೊನೆಯಲ್ಲಿ ಅವಳ ಕುಣಿತದ ಹುಚ್ಚು ಕೇವಲ ನೆನಪಾಗಿ ಉಳಿದಿದೆ. ಅದಕ್ಕೆ ಪರ್ಯಾಯವಾಗಿ ಈಗ fashion ಅನ್ನು passion ಆಗಿಸಿಕೊಂಡಿದ್ದಾಳೆ. ಅಡಿಯಿಂದ ಮುಡಿಯವರೆಗೆ ಎಲ್ಲವೂ ಸರಿಯಾಗಿರಬೇಕು. ಬಟ್ಟೆ, hair band, ಚಪ್ಪಲಿಯ ವಿನ್ಯಾಸ ಎಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕು. Hair style ನಲ್ಲಿ ಕೊಂಚವೂ ಕೊಂಕು ಸಹಿಸಿಕೊಳ್ಳುವುದಿಲ್ಲ. ಸರಿಯಾಗಿ ಬಾಚದಿದ್ದರೆ ಮುಖ ಊದಿಸಿಕೊಳ್ಳುತ್ತಾಳೆ. ಹೊರಗಡೆ ಹೋಗುವಾಗ ತನ್ನ ಉಡುಪನ್ನು ತಾನೇ ಆರಿಸಕೊಳ್ಳಬೇಕು. ಬೆಳಿಗ್ಗೆ ಸ್ಕೂಲಿಗೆ ಬಸ್ಸಿನಲ್ಲಿ ಹೋಗುತ್ತಾಳೆ. ಶೀತ ಗಾಳಿ ಇದ್ದರೂ ಸ್ಕಾರ್ಫ್ ಕಟ್ಟಿಕೊಳ್ಳುವುದಿಲ್ಲ, ಕೂದಲು ಅಸ್ತವ್ಯಸ್ತ ಆಗುತ್ತವೆ ಎಂದು. ಬಹಳ style conscious ಆಗಿದ್ದಾಳೆ . ಯಾರಾದರು ಕಿರಿಯರಾಗಲಿ, ಹಿರಿಯರಾಗಲಿ ಹೊಸ ವಿನ್ಯಾಸದ ದಿರಿಸಿನಲ್ಲಿ ಕಂಡರೆ ಬಹಳ ಗಮನಿಸುತ್ತಾಳೆ. ಬಟ್ಟೆ ಅಂಗಡಿಗೆ ಹೋದಾಗ ಅಂತಹದ್ದನ್ನೇ ಹುಡುಕುತ್ತಾಳೆ.

ಮಗರಾಯನಿಗೆ ಅವನ ತರಗತಿಯಲ್ಲಿ ಒಬ್ಬಳು ಸ್ನೇಹಿತೆ ಸಿಕ್ಕಿದ್ದಾಳೆ. ತನ್ನ ಪಕ್ಕ ಅವಳಲ್ಲದೆ ಬೇರೆಯವರು ಕುಳಿತುಕೊಳ್ಳುವಂತಿಲ್ಲ. ಬೇರೆ ಮಕ್ಕಳು ಅವಳೊಂದಿಗೆ ಕೀಟಲೆ ಮಾಡಿದರೆ ಅವಳ ಪರವಾಗಿ ಮಿಸ್ ಹತ್ತಿರ ದೂರುತ್ತಾನೆ. ಒಂದು ಬಾರಿ ತರಗತಿಯಿಂದ ಇದ್ದಕ್ಕಿದ್ದ ಹಾಗೆ ಎಲ್ಲೋ ಎದ್ದು ಹೋದವಳು ಬಹಳ ಹೊತ್ತು ಕಂಡಿರಲಿಲ್ಲ. ಆಗ ಇವನ್ನು ತನ್ನ ಇಬ್ಬರು ಸಹಪಾಠಿಗಳಿಗೆ ಶಾಲೆಯ ಬೇರೆ ಬೇರೆ ದಿಕ್ಕಿಗೆ ಹುಡುಕಲು ಕಳುಹಿಸಿ ತಾನೂ ಇನ್ನೊಂದು ದಿಕ್ಕಿನಲ್ಲಿ ಅವಳನ್ನು ಹುಡುಕಲು ಹೊಗಿ ಶೌಚಾಲಯದಲ್ಲಿ ಪತ್ತೆ ಹಚ್ಚಿದ್ದಾನೆ. ಅವನನ್ನು ಕರೆದುಕೊಂಡು ಬರಲು ನನ್ನಾಕೆ ಶಾಲೆಗೆ ಹೋದಾಗ ಆಗಾಗ ಅವನ ಮಿಸ್ ಇವನ ಇಂತಹ ಕತೆಗಳನ್ನು ಹಂಚಿಕೊಳ್ಳುತ್ತಾರೆ. ಅವನೂ ಸಹ ಒಮ್ಮೊಮ್ಮೆ ಅವಳಿಗೆ ಸಂಭದಿಸಿದ ಇಂತಹ ಕತೆಗಳನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ನಾವು ಸ್ವಲ್ಪ ರೇಗಿಸಿದರೆ ’ಇನ್ನು ಮೆಲೆ ಅವಳ story ಹೇಳುವುದಿಲ್ಲ ’ ಎಂದು ಹುಸಿ ಮುನಿಸು ಪ್ರದರ್ಶಿಸುತ್ತಾನೆ.

ನನ್ನ ಮಕ್ಕಳ ಬೌದ್ಡಿಕ ಬೆಳವಣಿಗೆಯ ಕುರುಹುಗಳು, ವಯಸ್ಸಿಗೆ ಮೀರಿದ ಪ್ರಬುದ್ದ ಮಾತುಗಳು, ಅವರ ಚೇಷ್ಟೆಗಳು, ತಮಾಷೆಗಳು... ಇವೇ ನನ್ನ ಮಟ್ಟಿಗೆ 2011ರ highlightಗಳು.

2011ರ ಮತ್ತೊಂದು ವಿಶೇಷ ನಮ್ಮ ಕುಟುಂಬಕ್ಕೆ ವಿಶೇಷ ಅತಿಥಿಯ ಸೇರ್ಪಡೆ. ಆ ವಿಶೇಷ ಅತಿಥಿ ಒಂದು ಪರ್ಷಿಯನ್ ಬೆಕ್ಕು(ಚಿತ್ರ). ನಮ್ಮ ನೆಂಟರೊಬ್ಬರ ಮನೆಯಿಂದ ತಂದಿದ್ದು. ಮನೆಗೆ ಬಂದ ಕೆಲವೇ ದಿನಗಳಲ್ಲಿ ನಮಗೆ ಹೊಂದಿಕೊಂಡುಬಿಟ್ಟಿತು. ಅದಕ್ಕೆ ಮಕ್ಕಳೆಂದರೆ ಬಹಳ ಖುಷಿ.ಮನೆಯಲ್ಲಿ ಮಕ್ಕಳಿಲ್ಲ ದಿದ್ದರೆ ಮಂಕಾಗಿರುತ್ತದೆ. ಅವರಿದ್ದರೆ ಅವರಿಗಿಂತ ಇದರ ಓಡಾಟ ಹೆಚ್ಚಾಗಿರುತ್ತದೆ. ಮಕ್ಕಳು ಅದಕ್ಕೆ 'ಸೀ' ಎಂದು ನಾಮಕರಣ ಮಾಡಿದ್ದಾರೆ.

ಸ್ವಚ್ಚತೆ ವಿಷಯದಲ್ಲಿ ಅದ್ಯಾವ ವಿಶ್ವ ವಿದ್ಯಾಲಯದಲ್ಲಿ ಸ್ವಚ್ಚತೆ ವಿಷಯದಲ್ಲಿ ಪದವಿ ಪಡೆದು ಬಂದಿದೆಯೊ? ಮಲಮೂತ್ರ ವಿಸರ್ಜನೆಗೆ ಶೌಚಾಲಯ ಹೊರತು ಪಡಿಸಿ ಹೊರಗೆಲ್ಲೂ ಇದುವರೆಗೂ ಎಂತಹ ಸಂದರ್ಭದಲ್ಲೂ ಗಲೀಜು ಮಾಡಿಲ್ಲ. ಶೌಚಾಲಯದೊಳಗೆ ಅದಕ್ಕಾಗಿ ಮೀಸಲಿರಿಸಿರುವ plastic trayಯನ್ನು ಶಿಸ್ತಿನಿಂದ ಬಳಸಿಕೊಳ್ಳುತ್ತದೆ.

ಮಕ್ಕಳು ರಾತ್ರಿ ಮಲಗಿದಾಗ ಅವರ ಪಕ್ಕದಲ್ಲಿ ಸ್ವಲ್ಪ ಹೊತ್ತು ಮಲಗಿ ನಂತರ ನಮ್ಮ ಅಮ್ಮನಿಗೆ ಕಂಪನಿ ಕೊಡುತ್ತದೆ. ರಾತ್ರಿ ಅಮ್ಮ ಬಚ್ಚಲಿಗೆ ಹೋದರೆ ಅವರ ಹಿಂದೆ ಬಾಡಿ ಗಾರ್ಡ್ ನಂತೆ ಇದೂ ಹೋಗಿ ಅವರು ಹಿಂದಿರುಗುವವರೆಗೂ ಬಚ್ಚಲ ಹೊರಗೆ ಕಾಯುತ್ತಿರುತ್ತದೆ. ಸಂಜೆ ಹೊತ್ತು ಅಮ್ಮ ಕುಳಿತುಕೊಳ್ಳುವ ಕುರ್ಚಿ ಮುಂದಿನ ಅಕಿ ಸಂಗ್ರಹಣೆಗಿರುವ ಸಣ್ಣ ಪ್ಲಾಸ್ಟಿಕ್ ಡ್ರಮ್ ಮೇಲೆ ಮುಖಾಮುಖಿಯಾಗಿ ಮಯ್ನ ಸಂಭಾಷಣೆಯಲ್ಲಿ ತೊಡಗಿರುವಂತೆ ಕುಳಿತುಕೊಳ್ಳುತ್ತದೆ. ಭಾವಜೀವಿಯಾಗಿ ನಮ್ಮ ಬದುಕಿನ ಒಂದು ಭಾಗ ಆಗಿದೆ ಈ ಬೆಕ್ಕು.

ಇನ್ನು ವೃತ್ತಿ ಜೀವನದಲ್ಲಿ , ಏಕತಾನತೆಯ ನಡುವೆಯೂ ಒಂದಿಷ್ಟು ಸಂತೃಪ್ತಿ ಹಾಗು ಸಾರ್ಥಕತೆಯ ಸಂಗತಿಗಳ ಕುರುಹುಗಳು ನೆನಪಿನ ಪುಟಗಳಲ್ಲಿ ಅಚ್ಚಾಗಿವೆ. ನಮ್ಮ ವೃತ್ತಿಯ ಅವಿಭಾಜ್ಯ ಅಂಗವಾಗಿರುವ ವರ್ಗಾವಣೆಯಿಂದಾಗಿ 'ಬಡವರ ಊಟಿ' ಹಾಸನ ದಿಂದ 'ಸಾಂಸ್ಕೃತಿಕ ರಾಜಧಾನಿ' ಮೈಸೂರಿಗೆ ಬರಬೇಕಾಯಿತು. ಕುಟುಂಬದ ಇತರರನ್ನು ಹಾಸನದಲ್ಲೇ ಉಳಿಸಿ ನಾನೊಬ್ಬ ಜಂಗಮನಂತೆ ಮೈಸೂರಿನಲ್ಲಿ ಪುಟ್ಟ ಬಿಡಾರ ಹೂಡಿಕೊಂಡಿದ್ದೇನೆ. ಈಗ ನಮ್ಮ ಮನೆಗೆ ನಾನು ವಾರಾಂತ್ಯದ ಅತಿಥಿ.

ಈ ವರ್ಷ ನನ್ನ ಪುಸ್ತಕ ಭಂಡಾರಕ್ಕೆ ಬಹಳಷ್ಟು ಸೇರ್ಪಡೆಗಳಾಗಿವೆ. ಆದರೆ ಓದಿ ಮುಗಿಸಿದ ಪುಸ್ತಕಗಳು ಕೇವಲ ಬೆರಳೆನಿಕೆಯಷ್ಟು ಮಾತ್ರ. ಸೋಮಾರಿತನ ಎಂಬ ಬಹುದಿನದ ಕಾಯಿಲೆಯೊಂದಿಗಿನ ಆತ್ಮಿಯ ಒಡನಾಟ ಮುಂಚಿನಂತೆಯೇ ಮುಂದುವರಿದಿದೆ. ಸಮಯದ ಅಭಾವ ಇದೆಯಾದರೂ, ಸಿಗುವ ಒಂದಿಷ್ಟು ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕೊರಗು ಮುಂದುವರಿದಿದೆ. ಎಷ್ಟೋ ಕಾಲದ ಹಿಂದೆ ಹುಟ್ಟಿದ ಕನಸುಗಳು, ಚಿಗುರಿದ ಆಸೆಗಳು ಇನ್ನೂ ಹಸಿರಾಗಿಯೇ ಇವೆ. ಅವುಗಳು ಕೈಗೂಡುತ್ತವೆ ಎಂಬ ನಂಬಿಕೆ ಅಷ್ಟೇ ಗಟ್ಟಿಯಾಗಿದೆ.

1 comment:

  1. ಜಾವೀದ್,
    ನೀವು ನಿಜಕ್ಕೂ ಅದ್ಬುತ ಬರಹಗಾರರು. ಇದೊಂದೇ ಲೇಖನ ಸಾಕು ಅದೆಲ್ಲವನ್ನು ಅರ್ಥಮಾಡಿಕೊಳ್ಳಲು. ಸೂಕ್ಷ್ಮ ವಿಚಾರಗಳನ್ನು ಗಮನಿಸುವುದರಲ್ಲಿ ನಿಮಗೆ ಖುಷಿಯ ಜೊತೆಗೆ ತನ್ಮಯತೆಯೂ ಇದೆ. ಹೀಗೆ ಆರುತಿಂಗಳಿಗೆ ಒಂದು ಲೇಖನ ಬರೆಯುವ ಬದಲು ತಿಂಗಳಿಗೊಂದಾದರೂ ಬರೆಯಿರಿ ಅಂತ ನನ್ನ ವಿನಂತಿ.
    ಪ್ರೀತಿಯಿಂದ..
    ಶಿವು.ಕೆ
    ಬೆಂಗಳೂರು.

    ReplyDelete